ಪಣಜಿ: ರಾಹುಲ್ ಗಾಂಧಿಯವರು ಭಾರತ ಜೋಡಿಸಿ (ಜೋಡೊ) ಯಾತ್ರೆಯನ್ನು ನಿಲ್ಲಿಸಿ, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ಗೆ ಹೋಗಬೇಕು ಎಂದು ಕಾಂಗ್ರೆಸ್ ಸಂಸದ, ಗೋವಾದ ಮಾಜಿ ಸಿಎಂ ಫ್ರಾನ್ಸಿಸ್ಕೊ ಸರ್ಡಿನಾ ಸೋಮವಾರ ಹೇಳಿದ್ದಾರೆ.
ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಭಾರತ ಜೋಡಿಸಿ ಯಾತ್ರೆಯು ಸದ್ಯ ಕರ್ನಾಟಕದ ಬಳ್ಳಾರಿಯಲ್ಲಿದೆ.
ಎಐಸಿಸಿ ಅಧ್ಯಕ್ಷ ಗಾದಿಯ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆಗೆ ಸೋಮವಾರ ಬಿಡುವು ನೀಡಲಾಗಿದೆ. ಇನ್ನೊಂದೆಡೆ ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಪ್ರಚಾರ ಅಭಿಯಾನ ಬಿರುಸುಗೊಂಡಿದೆ. ಗುಜರಾತ್‌ಗೆ ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಸಂಸದ ಫ್ರಾನ್ಸಿಸ್ಕೊ ಸರ್ಡಿನಾ, 'ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಿ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ಗೆ ಹೋಗಬೇಕು. ಅಲ್ಲಿ ಸಾರ್ವಜನಿಕರನ್ನು ಜಾಗೃತಗೊಳಿಸಬೇಕು. ಆಗ ಮಾತ್ರ ಬಿಜೆಪಿಯನ್ನು ಸೋಲಿಸಬಲ್ಲ ಏಕೈಕ ಪಕ್ಷವಾದ ಕಾಂಗ್ರೆಸ್‌ಗೆ ಮತ ಸಿಗಲು ಸಾಧ್ಯ. ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿ ಕಾಂಗ್ರೆಸ್ ಮಾತ್ರ' ಎಂದು ಅವರು ಹೇಳಿದ್ದಾರೆ.
ಭಾರತ ಜೋಡಿಸಿ ಯಾತ್ರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆ.7ರಂದು ಚಾಲನೆ ದೊರೆತಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯಾತ್ರೆಯ ನೇತೃತ್ವ ವಹಿಸಿದ್ದಾರೆ. ತಮಿಳುನಾಡು, ಕೇರಳ ಹಾದು ಬಂದಿರುವ ಯಾತ್ರೆಯು ಈಗ ಕರ್ನಾಟಕದ ಬಳ್ಳಾರಿಯಲ್ಲಿದೆ. ಜಮ್ಮುವಿನಲ್ಲಿ ಯಾತ್ರೆ ಅಂತ್ಯವಾಗಲಿದೆ.