ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ 15ನೇ ವರ್ಷದ ಶಾರದೋತ್ಸವವು ಬುಧವಾರ ಅಪರಾಹ್ನ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನವಾಯಿತು.
ಬದಿಯಡ್ಕ ಶ್ರೀ ಗುರುಸದನದಲ್ಲಿ ಬೆಳಗ್ಗೆ ಕೌಂಡಿಕಾನ ಶ್ರೀ ರಕ್ತೇಶ್ವರೀ ಭಜನಾ ಸಂಘ ಸಾಮಕೊಚ್ಚಿ ಬಂದಡ್ಕ ಇವರು ಕುಣಿತ ಭಜನೆ ನಡೆಸಿಕೊಟ್ಟರು. ಪುಟ್ಟ ಮಕ್ಕಳಿಗೆ ವಿದ್ಯಾರಂಭ, ಅಕ್ಷರಾಭ್ಯಾಸ ಮಾಡಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ವಿಶೇಷ ಪ್ರಾರ್ಥನೆಯ ನಂತರ ಭಕ್ತಾದಿಗಳು ಭೋಜನ ಪ್ರಸಾದ ಸ್ವೀಕರಿಸಿದರು. ಅಪರಾಹ್ಣ ಶ್ರೀ ದೇವಿಯ ಭವ್ಯ ಶೋಭಾಯಾತ್ರೆ ಆರಂಭಗೊಂಡು ಬದಿಯಡ್ಕ ಪೇಟೆ, ಬಸ್ ನಿಲ್ದಾಣ, ಕೆಡೆಂಜಿ ರಸ್ತೆ, ಮೇಲಿನ ಪೇಟೆಯಾಗಿ ಸಾಗಿ ಪೆರಡಾಲ ಶ್ರೀ ವರದಾ ನದಿಯಲ್ಲಿ ವಿಗ್ರಹ ಜಲಸ್ಥಂಭನ ಮಾಡಲಾಯಿತು. ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಶಾಂತ ದುರ್ಗಾ ಕುಣಿತ ಭಜನಾ ತಂಡ ನಿಡ್ಪಳ್ಳಿ, ಮರಾಟಿ ಯುವ ವೇದಿಕೆ ಭಜನಾ ತಂಡ, ಕೊಂಬೆಟ್ಟು ಪುತ್ತೂರು, ಶ್ರೀದೇವಿ ಭಜನಾ ಮಂಡಳಿ, ಸುಂದರಗಿರಿ ಬಾಳೆಮೂಲೆ ಕಾಟುಕುಕ್ಕೆ, ಕೌಂಡಿಕಾನ ಶ್ರೀ ರಕ್ತೇಶ್ವರೀ ಭಜನಾ ಸಂಘ ಸಾಮಕೊಚ್ಚಿ ಬಂದಡ್ಕ ಹಾಗೂ ಯಶಸ್ವಿ ಮರಾಟಿ ಭಜನಾಸಂಘ ಕುಂಟಾಲುಮೂಲೆ ಇವರು ಕುಣಿತ ಭಜನೆಯನ್ನು ನಡೆಸಿಕೊಟ್ಟರು. ಚೆಂಡೆವಾದಕರ ತಂಡವು ಮೆರವಣಿಗೆಯಲ್ಲಿ ಗಮನಸೆಳೆಯಿತು. ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ ರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಜರಗಿದವು. ಸಂಜೆ ಪೆರಡಾಲ ಶ್ರೀ ವರದಾ ನದಿ ತಟದಲ್ಲಿ ಶ್ರೀಶಾರದಾ ವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸಿ ಜಲಸ್ಥಂಭನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.