ಒತ್ತಡ ಅನ್ನೋದು ಇತ್ತಿಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ನಿರಂತರ ಹತ್ತು ಗಂಟೆ
ಕೆಲಸದಿಂದಾಗಿ ಸಾಮಾನ್ಯವಾಗಿ ಒತ್ತಡ ಹೆಚ್ಚುತ್ತಿದೆ. ಇನ್ನು ಕೌಟುಂಬಿಕ ಸಮಸ್ಯೆಯು
ಮನುಷ್ಯನಿಗೆ ಒತ್ತಡ ಜಾಸ್ತಿ ಮಾಡುತ್ತಿದೆ. ತೀವ್ರವಾದ ಒತ್ತಡ ನಮ್ಮ ಆರೋಗ್ಯದ ಮೇಲೆ
ಗಂಭೀರ ಪರಿಣಾಮ ಬೀರುತ್ತಿದೆ.
ಕೆಲವೊಂದು ಬಾರಿ ಒತ್ತಡದಿಂದ ನಾವೇ ನಮ್ಮಲ್ಲಿ ಕಳೆದು ಹೋಗುವ ಪರಿಸ್ಥಿತಿ
ನಿರ್ಮಾಣವಾಗುತ್ತಿದೆ. ಆದರೆ ನಿಮಗೊಂದು ನೆನಪಿರಲಿ ನಮ್ಮ ಈ ಒತ್ತಡ ನಮ್ಮ ದೇಹದ ವಾಗಸ್
ನರದ ಮೇಲೆ ಪರಿಣಾಮ ಬೀರುತ್ತದೆ. ಹೌದು, ವಾಗಸ್ ನರ ಮೆದುಳನ್ನು ದೇಹಕ್ಕೆ ಸಂಪರ್ಕಿಸುವ
ಕಪಾಲದ ನರವಾಗಿದೆ. ವಾಗಸ್ ನರವಿಲ್ಲದೆ, ನಮ್ಮ ದೇಹವು ಅತ್ಯಂತ ಮೂಲಭೂತ ಚಟುವಟಿಕೆಗಳನ್ನು
ಸಹ ನಿರ್ವಹಿಸಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಹೆಚ್ಚಿನ ಒತ್ತಡವು ವಾಗಸ್ ನರದ ಮೇಲೆ ಪರಿಣಾಮ ಬೀರುವುದರಿಂದ ಹಲವು
ಸಮಸ್ಯೆಗಳನ್ನು ಉಂಟು ಮಾಡುತ್ತದೆ. ವಾಗಸ್ ನರ ವ್ಯವಸ್ಥೆ ಯಾವ ರೀತಿಯ ಪರಿಣಾಮ
ಬೀರುತ್ತದೆ ಅಂದರೆ ನಮ್ಮ ದೇಹದಲ್ಲಿನ ಒತ್ತಡದಿಂದ ಉಂಟಾಗುವ ಸಮಸ್ಯೆಯನ್ನು
ಸಮತೋಲನಗೊಳಿಸಬಹುದು ಮತ್ತು ಇದು ವಿಶ್ರಾಂತಿ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.
ಹಾಗಾದರೆ ಒತ್ತಡದಿಂದ ಉಂಟಾಗುವ ಸಮಸ್ಯೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುವ
ವಾಗಸ್ ನರವನ್ನು ಉತ್ತೇಜಿಸುವುದು ಹೇಗೆ..? ಇದರಿಂದ ಸಿಗುವ ಆರೋಗ್ಯದ ಲಾಭವೇನು..?
ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ವಾಗಸ್ ನರ ಎಂದರೇನು?
ವಾಗಸ್ ನರ ಎಂದರೆ ನಿಮ್ಮ
ಪ್ಯಾರಾಸಿಂಪಥೆಟಿಕ್ ನರಮಂಡಲದ ಮುಖ್ಯ ನರಗಳಾಗಿವೆ. ಈ ವ್ಯವಸ್ಥೆಯು ನಿಮ್ಮ
ಜೀರ್ಣಕ್ರಿಯೆ, ಹೃದಯ ಬಡಿತ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯಂತಹ ನಿರ್ದಿಷ್ಟ ದೇಹದ
ಕಾರ್ಯಗಳನ್ನು ನಿಯಂತ್ರಿಸುತ್ತದೆ. ಈ ಕಾರ್ಯಗಳು ಅನೈಚ್ಛಿಕವಾಗಿರುತ್ತವೆ, ಅಂದರೆ ನೀವು
ಅವುಗಳನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಅದುವೇ ಸ್ವಯಂಚಾಲಿತವಾಗಿ
ನಿಯಂತ್ರಿಸುತ್ತದೆ.
ಒತ್ತಡವು ವಾಗಸ್ ನರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಒತ್ತಡ ಮತ್ತು ವಾಗಸ್ ನರಕ್ಕೆ ಅವಿನಾಭಾವ ಸಂಬಂಧವಿದೆ. ಹೌದು, ದೀರ್ಘಕಾಲದ ಒತ್ತಡವು
ವಾಗಸ್ ನರವನ್ನು ಹಾನಿಗೊಳಿಸುತ್ತದೆ. ಈ ರೀತಿ ಹಾನಿಗೊಳಗಾದರೆ ಇದು ಮನುಷ್ಯನಲ್ಲಿ ಆತಂಕ
ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೇ ವಾಗಸ್ ನರದ ದುರ್ಬಲತೆ
ಅಥವಾ ಹಾನಿಯಿಂದ ದೇಹವು ರೋಗಗಳು ಮತ್ತು ಸೋಂಕುಗಳಿಗೆ ಹೆಚ್ಚು ಒಳಗಾಗಬಹುದು. ಒತ್ತಡ
ಮತ್ತು ಆತಂಕ ಎರಡೂ ವಾಗಸ್ ನರವನ್ನು ಪ್ರಚೋದಿಸಬಹುದು. ಆತಂಕವು ಒತ್ತಡದ ಲಕ್ಷಣಗಳನ್ನು
ಉಲ್ಬಣಗೊಳಿಸುವುದರಿಂದ ಮತ್ತು ಒತ್ತಡವು ಆತಂಕವನ್ನು ಉಂಟುಮಾಡಬಹುದು, ಇವೆರಡೂ
ಒಂದಕ್ಕೊಂದು ಸಂಬಂಧಿಸಿವೆ. ವಾಗಸ್ ನರದ ಸಮಸ್ಯೆಯಿಂದ ಹಲವಾರು ರೋಗಲಕ್ಷಣಗಳು
ಉಂಟಾಗಬಹುದು. ಆರೋಗ್ಯ ಸಮಸ್ಯೆಗಳು ಹೊಟ್ಟೆ ನೋವು, ವಾಂತಿ, ವಾಕರಿಕೆ, ತಲೆತಿರುಗುವಿಕೆ
ಅಥವಾ ಮೂರ್ಛೆ ಹೋಗುವ ಸಮಸ್ಯೆಗಳು ಕಾಡುತ್ತದೆ.
ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ವಾಗಸ್ ನರವನ್ನು ಉತ್ತೇಜಿಸುವ 5 ಪ್ರಮುಖ
ತಂತ್ರಗಳು ಏನು..?
ನಿಮ್ಮ ವಾಗಲ್ ಟೋನ್ ಅನ್ನು ಹೆಚ್ಚಿಸುವುದರಿಂದ ನಿಮ್ಮ ಪ್ಯಾರಾಸಿಂಪಥೆಟಿಕ್
ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಅದು ನಿಮ್ಮನ್ನು ಶಾಂತಗೊಳಿಸುತ್ತದೆ. ಈ ಮೂಲಕ
ನಿಮ್ಮ ಆರೋಗ್ಯವು ಸರಿ ಇರುತ್ತದೆ, ಅಲ್ಲದೇ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾದರೆ
ನಿಮ್ಮ ವಾಗಸ್ ನರವನ್ನು ಉತ್ತೇಜಿಸಲು ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು
ನಿಯಂತ್ರಿಸುವುದು ಹೇಗೆ..? ಇಲ್ಲಿದೆ ಈ ಸಂಬಂಧ ಐದು ವಿಧಾನಗಳು.
ಹೊಟ್ಟೆಯ ಉಸಿರಾಟ
ವಾಗಸ್ ನರದ ಆರೋಗ್ಯಕರ ಕಾರ್ಯನಿರ್ವಹಣೆಯನ್ನು ಉತ್ತೇಜಿಸುವ ಪ್ರಮುಖ ತಂತ್ರವೆಂದರೆ
ಅದುವೇ ಹೊಟ್ಟೆಯಿಂದ ಆಳವಾಗಿ ಮತ್ತು ನಿಧಾನವಾಗಿ ಉಸಿರಾಡುವುದು. ಹೌದು, ಹೀಗೆ
ಮಾಡುವುದರಿಂದ ನೀವು ಒತ್ತಡದಿಂದ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು
ಉತ್ತಮವಾಗುತ್ತದೆ. ಇದು ನಿತ್ಯವೂ ಮಾಡಿದರೆ ಉತ್ತಮ ಅಥವಾ ನಿಮಗೆ ಒತ್ತಡ ಇದೆ ಎಂದು
ಅನಿಸಿದಾಗ ಈ ಉಸಿರಾಟದ ತಂತ್ರವನ್ನು ಬಳಸಬಹುದು. ಒತ್ತಡ ಬಂದಾಗ ನಿಮ್ಮ ಉಸಿರಾಟದ ಲಯದ
ಮೇಲೆ ನೀವು ಕೇಂದ್ರೀಕರಿಸಿದಾಗ, ನಿಮ್ಮ ಒತ್ತಡದ ದೂರ ಉಳಿಯಬಹುದು. ಏಕೆಂದರೆ ನಿಮ್ಮ
ಯೋಚನೆ, ಗಮನ ಉಸಿರಾಟದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಹೊಟ್ಟೆಯಿಂದ ಉಸಿರಾಡುವ ಮೂಲಕ
ಏನೋ ಒಂದು ವಸ್ತು ದೇಹದಿಂದ ಹೊರಗೆ ಹೋದ ಅನುಭವವು ನಿಮಗೆ ಆಗುತ್ತದೆ.
ಅಕ್ಯುಪಂಕ್ಚರ್
ಅಕ್ಯುಪಂಕ್ಚರ್ ಚೀನಿಯರ ಸಾಂಪ್ರದಾಯಿಕ ಚಿಕಿತ್ಸಾ ವಿಧಾನವಾಗಿದ್ದು, ಇದು ದೇಹದಲ್ಲಿನ
ನೋವು ಮತ್ತು ಒತ್ತಡವನ್ನು ನಿವಾರಿಸುತ್ತದೆ. ಅಕ್ಯುಪಂಕ್ಚರ್ ಚಿಕಿತ್ಸೆಯಲ್ಲಿ ತಜ್ಞರು
ದೇಹದ ನಿರ್ದಿಷ್ಟ ಬಿಂದುಗಳಲ್ಲಿ ತೆಳುವಾದ, ಘನವಾದ, ಲೋಹೀಯ ಸೂಜಿಗಳನ್ನು
ಕುತ್ತುತ್ತಾರೆ. ಬಳಿಕ ಇದನ್ನು ತೆಗೆಯಲಾಗುತ್ತದೆ. ಈ ಚಿಕಿತ್ಸೆ ಬಳಿಕ ನೋವು, ಆತಂಕ
ಮತ್ತು ಮೈಗ್ರೇನ್‌ಗಳಂತಹ ಹಲವಾರು ಕಾಯಿಲೆಗಳು ಮಂಗಮಾಯವಾಗುತ್ತದೆ ಎನ್ನುವುದು ಹಲವು
ಸಂಶೋಧನೆಗಳಿಂದ ತಿಳಿದುಬಂದಿದೆ. ಅಲ್ಲದೇ ಈ ಚಿಕಿತ್ಸೆಉರಿಯೂತವನ್ನು ಕಡಿಮೆ ಮಾಡುವ ಮೂಲಕ
ಮತ್ತು ರಕ್ತದ ಹರಿವನ್ನು ಉತ್ತೇಜಿಸುವ ಮೂಲಕ, ಇದು ವಾಗಸ್ ನರಗಳ ಚೇತರಿಕೆಗೆ ಸಹ ಸಹಾಯ
ಮಾಡುತ್ತದೆ ಎಂದು ಹೇಳಲಾಗಿದೆ. ವಾಗಸ್ ನರಗಳ ಸಮತೋಲನಕ್ಕೆ ಇದು ಸಹಾಯ ಮಾಡುವುದರಿಂದ ಈ
ವಿಧಾನವನ್ನು ವಾಗಸ್ ನರಗಳ ಉತ್ತೇಜನಕ್ಕೆ ಬಳಸಬಹುದು.
ಕರುಳಿನ ಕಾರ್ಯವನ್ನು ಸುಧಾರಿಸಿ
ಕರುಳು ಮತ್ತು ಮೆದುಳಿನ ನಡುವಿನ ಲಿಂಕ್ ಬಗ್ಗೆ ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ.
ನಿಮ್ಮ ಕರುಳು ಉತ್ತಮ ಸ್ಥಿತಿಯಲ್ಲಿಲ್ಲದಿದ್ದರೆ ನಿಮ್ಮ ಮಾನಸಿಕ ಆರೋಗ್ಯವು ಸರಿ ಇಲ್ಲದೆ
ಇರಬಹುದು. ಯಾಕೆಂದರೆ ಸರಿಯಾಗಿರದ ಕರುಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ಬೀರಬಹುದು. ಅಲ್ಲದೇ ಕರಳಿಗೂ ವಾಗಸ್ ನರಕ್ಕೂ ಸಂಬಂಧವಿದೆ. ಇವುಗಳೆಲ್ಲ ಒಟ್ಟು ಸೇರಿ
ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನೀವು ವಾಗಸ್ ನರವನ್ನು
ಉತ್ತೇಜಿಸಲು, ಕರುಳನ್ನು ಸರಿಪಡಿಸಲು ಸಹಾಯ ಮಾಡುವ ಹಣ್ಣುಗಳು, ತರಕಾರಿಗಳು, ನೇರ
ಪ್ರೋಟೀನ್ ಮತ್ತು ಉತ್ತಮ ಕೊಬ್ಬುಗಳಂತಹ ಸಾಕಷ್ಟು ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ.
ಅಲ್ಲದೇ ನೀವು ಪ್ರೋಬಯಾಟಿಕ್ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳಬಹುದು.
ಶೀತ ಚಿಕಿತ್ಸೆ
ನೀವು ಎಂದಾದರೂ ತಣ್ಣೀರಿನ ಸ್ನಾನ ಮಾಡಿದ್ದೀರಾ? ಹಳ್ಳಿಯಲ್ಲಿ ಅನೇಕರು ತಣ್ಣೀರಿನ ಸ್ನಾನ
ಮಾಡುತ್ತಾರೆ. ಹೀಗೆ ತಣ್ಣೀರಿನ ಸ್ನಾನ ಮಾಡುವವರಿಗೆ ಗುಡ್ ನ್ಯೂಸ್ ಒಂದಿದೆ. ಹೌದು,
ತಣ್ಣೀರಿನ ಸ್ನಾನದಿಂದ ಆತಂಕ ಮತ್ತು ಒತ್ತಡ ಕಡಿಮೆ ಆಗುತ್ತದೆ. ಅಲ್ಲದೇ ಈ ರೀತಿಯ
ಸ್ನಾನವು ವಾಗಸ್ ನರವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಮತ್ತು ಆರೋಗ್ಯಕರ
ಮೈಟೊಕಾಂಡ್ರಿಯಾವನ್ನು ಬೆಂಬಲಿಸುತ್ತದೆ. ನಿಮಗೆ ಆತಂಕ ಅಥವಾ ಒತ್ತಡ ಇದ್ದಾಗ ಸ್ನಾನ
ಮಾಡದಿದ್ದರೂ ಪರವಾಗಿಲ್ಲ. ತಣ್ಣಗಿನ ನೀರಿನಲ್ಲಿ ಮುಖ ತೊಳೆದರೆ ಸಾಕು ನಿಮ್ಮ ಆತಂಕ,
ಒತ್ತಡ ಕಡಿಮೆ ಆಗುತ್ತದೆ.
ವ್ಯಾಯಾಮ!
ಇತ್ತೀಚಿನ ಅಧ್ಯಯನದ ಪ್ರಕಾರ, ನೀವು ನಿತ್ಯವು ವ್ಯಾಯಾಮ ಮಾಡುತ್ತಿದ್ದರೆ ಅಥವಾ ದೇಹಕ್ಕೆ
ಸಂಬಂಧಪಟ್ಟ ಯಾವುದೇ ಚಟುವಟಿಕೆ ನಡೆಸಿದರೆ ಅದು ನಿಮ್ಮ ವಾಗಸ್ ನರಗಳ ಮೇಲೆ ಸಕರಾತ್ಮಕ
ಪರಿಣಾಮ ಬೀರಬಹುದು. ಅಲ್ಲದೇ ವ್ಯಾಯಾಮದಿಂದಾಗಿ ನಿಮ್ಮ ಹೃದಯ ಬಡಿತದ ಉತ್ತಮವಾಗುತ್ತದೆ
ಮತ್ತು ವಾಗಸ್ ನರಗಳ ಚಟುವಟಿಕೆಯನ್ನು ನೀವು ಸುಧಾರಿಸಬಹುದು. ಅಲ್ಲದೇ ವ್ಯಾಯಾಮವು ನಿಮ್ಮ
ಉಸಿರಾಟ ಮತ್ತು ಹೃದಯರಕ್ತನಾಳದ ವ್ಯವಸ್ಥೆಗಳ ನಡುವೆ ಆರೋಗ್ಯಕರ ಸಮತೋಲನವನ್ನು
ಕಾಪಾಡಿಕೊಳ್ಳಲು ಸಹಾಯ ಮಾಡಲು ಪ್ಯಾರಸೈಪಥೆಟಿಕ್ ಪ್ರತಿಕ್ರಿಯೆಯನ್ನು
ನಿಯಂತ್ರಿಸುತ್ತದೆ.
ಹೀಗೆ ನೀವು ವಾಗಸ್ ನರಗಳ ಸಮತೋಲನದಿಂದ ನಿಮಗೆ ಉಂಟಾಗಬಹುದಾದ ಒತ್ತಡ, ಆತಂಕವನ್ನು
ನಿವಾರಣೆ ಮಾಡಬಹುದಾಗಿದೆ.