ಚೆನ್ನೈ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶಿ ತರೂರ್ ಅವರು ತಮ್ಮ ಪ್ರಣಾಳಿಕೆಯನ್ನು ಗುರುವಾರ ಇಲ್ಲಿ ಬಿಡುಗಡೆ ಮಾಡಿದ್ದು, ಪಕ್ಷದ ರಾಜ್ಯ ಅಧ್ಯಕ್ಷರ ಅಧಿಕಾರ ಅವಧಿಯನ್ನು ಸೀಮಿತಗೊಳಿಸಿ, ಸಕ್ರಿಯ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ.
ತಮಗೆ ಹೆಚ್ಚಿನ ಬೆಂಬಲ ಇಲ್ಲದ ಕಾರಣ ಸ್ಪರ್ಧಾ ಕಣದಿಂದ ಹೊರಗುಳಿಯಲಿದ್ದಾರೆ ಎಂಬ ವದಂತಿಗಳನ್ನು ತಳ್ಳಿ ಹಾಕಿರುವ ಅವರು, ವಿವಿಧ ಕಡೆಗಳಿಂದ ತಮಗೆ ಬೆಂಬಲ ದೊರಕುತ್ತಿದೆ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಪಾರ ಗೌರವ ಇದ್ದು, ತಮ್ಮದೇನಿದ್ದರೂ ಸ್ನೇಹಮಯ ಹೋರಾಟ, ಇದೇನಿದ್ದರೂ ಬಿಜೆಪಿಯನ್ನು ಎದುರಿಸಲು ವಿವಿಧ ಆಯಾಮಗಳನ್ನು ಒಳಗೊಂಡ ಸ್ಪರ್ಧೆಯಷ್ಟೇ ಎಂದರು.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಘಟಿಸುವ ಮತ್ತು ಅದಕ್ಕೆ ಶಕ್ತಿ ತುಂಬುವ ಅಗತ್ಯ ಇದೆ ಎಂದು ಅವರು ಹೇಳಿದರು.