ಪುಣೆ: ನ್ಯಾಯಾಲಯದ ಕಲಾಪ ಕೊಠಡಿಯಲ್ಲಿ ಕೂದಲನ್ನು ಸರಿಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಸೂಚಿಸಿ ಪುಣೆಯ ಜಿಲ್ಲಾ ನ್ಯಾಯಾಲಯ ಹೊರಡಿಸಿರುವ ನೋಟಿಸ್ ಒಂದು ಸಾಕಷ್ಟು ಕುತೂಹಲ ಕೆರಳಿಸಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾದ ನಂತರ ಅಕ್ಟೋಬರ್ 20 ರಂದು ಹೊರಡಿಸಲಾದ ಈ ಸೂಚನೆಯನ್ನು ಅಕ್ಟೋಬರ್ 22 ರಂದು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೋಟಿಸ್ ಅನ್ನು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ರವಿವಾರ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿದ್ದರು. ʻʻಕೋರ್ಟ್ ಸಭಾಂಗಣದಲ್ಲಿ ಮಹಿಳಾ ವಕೀಲೆಯರು ಆಗಾಗ ತಲೆಕೂದಲು ಸರಿಪಡಿಸಿಕೊಳ್ಳುತ್ತಿರುವುದನ್ನು ಗಮನಿಸಲಾಗಿದೆ, ಇದು ನ್ಯಾಯಾಲಯದ ಕಾರ್ಯನಿರ್ವಹಣೆಗೆ ತೊಡಕುಂಟು ಮಾಡುತ್ತದೆ, ಆದುದರಿಂದ ಮಹಿಳಾ ಮಕೀಲರು ಈ ರೀತಿ ಮಾಡದಂತೆ ಸೂಚಿಸಲಾಗಿದೆ,ʼʼ ಎಂದು ಜಿಲ್ಲಾ ನ್ಯಾಯಾಲಯದ ರಿಜಿಸ್ಟ್ರಾರ್ ಅವರ ಸಹಿಯಿದ್ದ ನೋಟಿಸ್‌ನಲ್ಲಿ ಹೇಳಲಾಗಿತ್ತು.
ನ್ಯಾಯಾಲಯದಲ್ಲಿ ಶಿಷ್ಟಾಚಾರ ಕಾಪಾಡುವ ಉದ್ದೇಶದಿಂದ ಈ ನೋಟಿಸ್ ನೀಡಲಾಗಿತ್ತು ಯಾರನ್ನೂ ಅವಮಾನಿಸುವ ಉದ್ದೇಶ ಅದರ ಹಿಂದೆ ಇಲ್ಲದೇ ಇದ್ದರೂ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಮ್ಮ ಗುರುತು ಬಹಿರಂಗಪಡಿಸಲು ಇಚ್ಛಿಸದ ನ್ಯಾಯಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.