ನವದೆಹಲಿ: ನ್ಯಾಯದಾನದ ವಿಳಂಬವು ದೇಶದ ಜನ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದ್ದು, ಕಾನೂನಿನ ಅಸ್ಪಷ್ಟತೆ, ಸಂಕೀರ್ಣತೆ ಕಡಿಮೆ ಮಾಡಿ ಮತ್ತು ಅದು ಸ್ಪಷ್ಟ ರೀತಿಯಲ್ಲಿ ಅರ್ಥವಾಗುವಂತೆ ಮಾಡಲು ಪ್ರಾದೇಶಿಕ ಭಾಷೆಗಳಲ್ಲಿ ಕೂಡ ತೀರ್ಪಗಳು ಬರುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ನರ್ಮದಾ ಜಿಲ್ಲೆಯ ಕೇವಡಿಯಾ ದಲ್ಲಿರುವ ಏಕತಾ ಪ್ರತಿಮೆ ಬಳಿ ಎರಡು ದಿನಗಳ ಕಾನೂನು ಮಂತ್ರಿ ಮತ್ತು ಕಾನೂನು ಕಾರ್ಯದರ್ಶಿಗಳ ಅಖಿಲ ಭಾರತ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಆನ್ಲೈನ್ ಮೂಲಕ ಮಾತನಾಡಿದ ಅವರು, ಪ್ರಾದೇಶಿಕ ಭಾಷೆಯಿಂದ ಜನರಿಗೆ ಸುಲಭ ನ್ಯಾಯ ಸಿಗುವಂತಾಗಬೇಕು. ಕಾನೂನು ಭಾಷೆ ಅಡ್ಡಿಯಾಗದೆ, ಬಡವರು ಸಹ ಅವುಗಳನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳಬಹುದು ಎಂದರು. ಈ ಸಮಸ್ಯೆ ಬಗೆಹರಿಸಲು ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡ ಕಾರ್ಯನಿರ್ವಹಿಸುತ್ತಿದೆ. ಪರ್ಯಾಯ ವ್ಯಾಜ್ಯ ಪರಿಹಾರ ಮತ್ತು ಲೋಕ ಅದಾಲತ್ಗಳಂತಹ ವ್ಯವಸ್ಥೆಗಳು ನ್ಯಾಯಾಲಯಗಳ ಹೊರೆ ಕಡಿಮೆ ಮಾಡಿ, ಬಡವರಿಗೆ ಸುಲಭ ನ್ಯಾಯ ದೊರಕಲು ನೆರವಾಗಿದೆ ಎಂದು ವಿವರಿಸಿದರು. ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರ 1,500 ಕ್ಕೂ ಹೆಚ್ಚು ಹಳೆಯ, ಬಳಕೆಯಲ್ಲಿಲ್ಲದ, ಅಪ್ರಸ್ತುತ ಕಾನೂನುಗಳನ್ನು ರದ್ದುಗೊಳಿಸಿದೆ. ಅವುಗಳಲ್ಲಿ ಹಲವು ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಮುಂದುವರೆದಿತ್ತು.
ಕಾನೂನನ್ನು ರೂಪಿಸುವಾಗ ಬಡವರೂ ಕೂಡ ಕಾನೂನನ್ನು ಅರ್ಥ ಮಾಡಿಕೊಳ್ಳುವಂತೆ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು. ಕಾನೂನನ್ನು ರೂಪಿಸುವಾಗ ಅದರ ವಯಸ್ಸು, ಮುಕ್ತಾಯ ದಿನಾಂಕ ನಿರ್ಧರಿಸಲಾಗುತ್ತದೆ. ಮುಕ್ತಾಯದ ದಿನಾಂಕ ಬಂದಾಗ ಅದೇ ಕಾನೂನನ್ನು ಹೊಸ ಸಂದರ್ಭಗಳಲ್ಲಿ ಪರಿಶೀಲಿಸಲಾಗುತ್ತದೆ. ಭಾರತದಲ್ಲಿಯೂ ಸಹ ನಾವು ಅದೇ ಮನೋಭಾವದಿಂದ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಯುವಜನತೆಗೆ ಕೂಡ ಮಾತೃಭಾಷೆಯಲ್ಲಿ ಕಾನೂನು ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಕಾನೂನು ಕೋರ್ಸ್ ಗಳನ್ನು ಮಾತೃಭಾಷೆಯಲ್ಲಿ ಮಾಡಲು, ಕಾನೂನುಗಳನ್ನು ಸರಳ ಭಾಷೆಯಲ್ಲಿ ಬರೆಯಲು ಮತ್ತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ಪ್ರಮುಖ ಪ್ರಕರಣಗಳ ಡಿಜಿಟಲ್ ಲೈಬ್ರರಿಗಳನ್ನು ಸ್ಥಳೀಯ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದರು.
ಡಿಜಿಟಲ್ ಬ್ಯಾಂಕಿಂಗ್ ಘಟಕ ಉದ್ಘಾಟನೆ: ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ದೇಶಾದ್ಯಂತ ವಿವಿಧ ಬ್ಯಾಂಕ್ಗಳ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ಪ್ರಧಾನಿ ಮೋದಿ ಭಾನುವಾರ ಆನ್ಲೈನ್ ಮೂಲಕ ಉದ್ಘಾಟಿಸಲಿದ್ದಾರೆ. ಅವುಗಳಲ್ಲಿ ಎರಡು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿನಿಂದ ಕಿಸಾನ್ ಸಮ್ಮಾನ್ ಸಮ್ಮೇಳನ
ನವದೆಹಲಿಯಲ್ಲಿ ನಡೆಯಲಿರುವ ಎರಡು ದಿನಗಳ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಅ.17ರಂದು ಚಾಲನೆ ನೀಡಲಿದ್ದಾರೆ. ಈ ವೇಳೆ 'ಒಂದು ರಾಷ್ಟ್ರ ಒಂದು ರಸಗೊಬ್ಬರ ' ಯೋಜನೆಯ ಭಾಗವಾಗಿ 'ಭಾರತ್' ಬ್ರಾಯಂಡ್ ಅಡಿಯಲ್ಲಿ ಸಬ್ಸಿಡಿ ಯೂರಿಯಾ ಚೀಲಗಳನ್ನು ಬಿಡುಗಡೆ ಮಾಡಲಿದ್ದಾರೆ ಹಾಗೂ 600 ಪಿಎಂ- ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ಪಿಎಂ-ಕಿಸಾನ್ ಯೋಜನೆಯ ಭಾಗವಾಗಿ 8.50 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ವಿದ್ಯುನ್ಮಾನವಾಗಿ 16 ಸಾವಿರ ಕೋಟಿ ರೂ.ಗಳ 12ನೇ ಕಂತನ್ನು ವರ್ಗಾಯಿಸಲಿದ್ದಾರೆ. ಎಲ್ಲ ಸಬ್ಸಿಡಿ ಮಣ್ಣಿನ ಪೋಷಕಾಂಶಗಳಾದ ಯೂರಿಯಾ, ಡಿ-ಅಮೋನಿಯಂ ಪಾಸ್ಪೇಟ್(ಡಿಎಪಿ), ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಎಂಒಪಿ) ಮತ್ತು ಎನ್ಪಿಕೆ ದೇಶಾದ್ಯಂತ ಭಾರತ್ ಬ್ರಾಯಂಡ್ನಡಿ ಮಾರಾಟವಾಗಲಿದೆ . ಕಂಪನಿಗಳು ಈ ಬ್ರಾಯಂಡ್ನಡಿ ಸಬ್ಸಿಡಿ ರಸಗೊಬ್ಬರಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.