ಮೊರಾದಾಬಾದ್: ಬಾಲಿವುಡ್‌ನ ಟಾಪ್ ನಟರು ಡ್ರಗ್ಸ್ ಸೇವಿಸುತ್ತಾರೆ ಎಂದು ಯೋಗ ಗುರು ಬಾಬಾ ರಾಮದೇವ್ ಆರೋಪಿಸಿದ್ದಾರೆ.
ಅವರ ಹೇಳಿಕೆಗಳ ವೀಡಿಯೊ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಶನಿವಾರ ನಡೆದ ಆರ್ಯವೀರ ಮತ್ತು ವೀರಾಂಗಣ ಸಮಾವೇಶದಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್, 'ಸಲ್ಮಾನ್ ಖಾನ್ ಡ್ರಗ್ಸ್ ತೆಗೆದುಕೊಳ್ಳುತ್ತಾರೆ.
ಆಮೀರ್ ಖಾನ್ ಬಗ್ಗೆ ನನಗೆ ಗೊತ್ತಿಲ್ಲ. ಶಾರುಖ್ ಖಾನ್ ಮಗ ಡ್ರಗ್ಸ್ ಸೇವಿಸುವಾಗ ಸಿಕ್ಕಿಬಿದ್ದು ಜೈಲಿಗೆ ಹೋಗಿ ಬಂದ. ನಟಿಯರ ವಿಚಾರ ಆ ದೇವರಿಗೆ ಮಾತ್ರ ಗೊತ್ತು' ಎಂದು ಹೇಳಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್ ಭಾನುವಾರ ವರದಿ ಪ್ರಕಟಿಸಿದೆ. ನಂತರ ಮಾತನಾಡಿದ ಅವರು, 'ಚಿತ್ರರಂಗದಲ್ಲಿ ಡ್ರಗ್ಸ್ ಇದೆ. ರಾಜಕೀಯದಲ್ಲೂ ಡ್ರಗ್ಸ್ ಇದೆ. ಚುನಾವಣೆ ಸಂದರ್ಭದಲ್ಲಿ ಮದ್ಯ ಹಂಚಲಾಗುತ್ತದೆ. ಭಾರತವನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಬೇಕು ಎಂಬ ಸಂಕಲ್ಪ ಮಾಡಬೇಕು. ಇದಕ್ಕಾಗಿ ಚಳವಳಿ ನಡೆಸುತ್ತೇವೆ' ಎಂದು ಹೇಳಿದ್ದಾರೆ.
ಕೋವಿಡ್-19 ಪಿಡುಗಿನ ಸಂದರ್ಭದಲ್ಲಿ ಅಲೋಪಥಿ ಚಿಕಿತ್ಸಾಪದ್ಧತಿ ಹಾಗೂ ಈ ಪದ್ಧತಿಯ ವೈದ್ಯರಿಗೆ ಅವಮಾನಿಸುವ ರೀತಿಯಲ್ಲಿ ಬಾಬಾ ರಾಮದೇವ್ ಅವರು ಜಾಹೀರಾತುಗಳನ್ನು ಪ್ರಕಟಿಸಿದ್ದರು. ಇದಕ್ಕಾಗಿ ರಾಮದೇವ್ ಅವರನ್ನು ಸುಪ್ರೀಂಕೋರ್ಟ್ ಕಳೆದ ಆಗಸ್ಟ್‌ನಲ್ಲಿ ತರಾಟೆಗೆ ತೆಗೆದುಕೊಂಡಿತ್ತು.