ಬದಿಯಡ್ಕ: ಕೇಂದ್ರ ಸರ್ಕಾರದ ನೀತಿ ಆಯೋಗದ ವತಿಯಿಂದ ಅನುಮೋದನೆಗೊಂಡು ನೂತನ್ ರೋಬೋಟಿಕ್ ತಂತ್ರಜ್ಞಾನದ ಅಧ್ಯಯನಕ್ಕಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಲಾಯಿತು. ಶುಕ್ರವಾರ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಆಂದ್ರಪ್ರದೇಶದ ಇಂಡಸ್ ಕೋಫಿ ಸಂಸ್ಥೆಯ ನಿರ್ದೇಶಕ ಮಹಾಬಲೇಶ್ವರ ಭಟ್ ಎಡೆಕ್ಕಾನ ಉದ್ಘಾಟಿಸಿದರು. ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ತಿಳಿಯುವ ಪ್ರಯೋಗಾಲಯವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ಒದಗಿಸಿರುವುದು ಹೆಮ್ಮೆಯೆನಿಸುತ್ತದೆ. ರೋಬೋಟಿಕ್ ತಂತ್ರಜ್ಞಾನದ ಅರಿವನ್ನು ಮೂಡಿಸುವಂತಹ ಪಠ್ಯಕ್ರಮವನ್ನು ಅಟಲ್ ಟಿಂಕರಿಂಗ್ ಲ್ಯಾಬ್‍ನಲ್ಲಿ ಅಳವಡಿಸಿಕೊಂಡಿದ್ದಾರೆ. ನೂತನ ಆವಿಷ್ಕಾರಗಳ ಮೂಲಕ ಇಲ್ಲಿನ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿಜ್ಞಾನ, ಗಣಿತ ಮೊದಲಾದ ಮೇಳಗಳಲ್ಲಿ ಭಾಗವಹಿಸಿ ಅನುಭÀವವನ್ನು ಪಡೆದ ವಿದ್ಯಾರ್ಥಿಗಳಿಗೆ ಇಂತಹ ನೂತನ ತಂತ್ರಜ್ಞಾನವು ಇನ್ನಷ್ಟು ಉತ್ತಮ ಪ್ರದರ್ಶನಕ್ಕೆ ಸಹಕಾರಿಯಾಗಲಿದೆ. ವಿಷಯ ಜ್ಞಾನವನ್ನು ಅರಿಯುವುದು, ಜೀವನದಲ್ಲಿ ಅಳವಡಿಸಿಕೊಳ್ಳುವುದು, ಇತರರಿಗೆ ತಿಳಿಹೇಳುವಂತೆ ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸುವುದು ಇದೆಲ್ಲವೂ ಅಟಲ್ ಟಿಂಕರಿಂಗ್ ಲ್ಯಾಬಿನ ಪಠ್ಯಕ್ರಮದಲ್ಲಿ ಒಳಗೊಂಡಿದೆ. ಉತ್ತಮ ಶಿಕ್ಷಣವನ್ನು ನೀಡುತ್ತಿರುವಂತಹ ಈ ಸಂಸ್ಥೆಯ ಬಗ್ಗೆ ಹೆಮ್ಮೆಯಿದೆ ಎಂದರು.
ಶ್ರೀರಾಮಚಂದ್ರಾಪುರ ಮಠದ ಡಾ. ವೈ.ವಿ.ಕೃಷ್ಣಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ, ಮಾತೃಸಮಿತಿಯ ರೇಶ್ಮಾ ಕನಕಪ್ಪಾಡಿ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು. ಅಧ್ಯಾಪಿಕೆಯರಾದ ರಶ್ಮಿ ಪೆರ್ಮುಖ ಸ್ವಾಗತಿಸಿ, ಸುಪ್ರೀತಾ ರೈ ವಳಮಲೆ ವಂದನಾರ್ಪಣೆಗೈದರು. ಅಟಲ್ ಟಿಂಕರಿಂಗ್ ಲ್ಯಾಬ್ ತರಬೇತಿಯನ್ನು ಪಡೆದ 30 ವಿದ್ಯಾರ್ಥಿಗಳಲ್ಲಿ ಪೂಜಾಶ್ರೀ ಹಾಗೂ ಬ್ರಿಜೇಶ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆಂದ್ರಪ್ರದೇಶದ ಇಂಡಸ್ ಕೋಫಿ ಸಂಸ್ಥೆಯು ಲ್ಯಾಬ್‍ನ ನಿರ್ಮಾಣದಲ್ಲಿ ಪೂರ್ಣಸಹಕಾರವನ್ನು ನೀಡಿರುತ್ತದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ: ಮಹಾಬಲೇಶ್ವರ ಭಟ್: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ
0
ಅಕ್ಟೋಬರ್ 30, 2022