ಕೋಲ್ಕತ: ಉತ್ತರ ಬಂಗಾಳ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿಸುವ ಅಥವಾ ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಇಂಗಿತವನ್ನು ಬಿಜೆಪಿ ಮುಖಂಡರು ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಅಲ್ಲಿನ ಸಿಪಿಎಂ ನಾಯಕನ ಮನೆಗೆ ಭೇಟಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಮತ್ತು ಸಿಪಿಎಂ ನಾಯಕರ ಭೇಟಿಯ ಹಿಂದೆ ಈ ಪ್ರದೇಶದ ಆಡಳಿತ ಮತ್ತು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವಿದೆ ಎಂದು ಆಡಳಿತ ಪಕ್ಷ ಟಿಎಂಸಿ ಆಪಾದಿಸಿದೆ. ಈ ಆರೋಪವನ್ನು ಬಿಜೆಪಿ ಮತ್ತು ಸಿಪಿಎಂ ಅಲ್ಲಗಳೆದಿವೆ. ಇದು ಕೇವಲ ಔಪಚಾರಿಕ ಭೇಟಿ ಎಂದು ಪ್ರತಿಕ್ರಿಯಿಸಿವೆ.
ಮಾಜಿ ಸಚಿವ, ಸಿಲಿಗುರಿಯ ಮಾಜಿ ಮೇಯರ್, ಸಿಪಿಎಂ ಮುಖಂಡ ಅಶೋಕ್ ಭಟ್ಟಾಚಾರ್ಯ ಅವರ ನಿವಾಸಕ್ಕೆ ಸೋಮವಾರ ಬಿಜೆಪಿಯ ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ಮತ್ತು ಸಿಲಿಗುರಿ ಶಾಸಕ ಶಂಕರ್ ಘೋಶ್ ಭೇಟಿ ನೀಡಿದ್ದರು. ಬಳಿಕ ಭೇಟಿಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಇದು ಔಪಚಾರಿಕ ಭೇಟಿ ಅಲ್ಲ. ಉತ್ತರ ಬಂಗಾಳದ ರಾಜಕೀಯ ಅಸ್ಥಿರಗೊಳಿಸುವ ಪ್ರಯತ್ನದ ಭಾಗವಾಗಿದೆ. ಕಳೆದ ವಿಧಾನಸಭೆಯಲ್ಲಿ ಸೋತಿರುವ ಬಿಜೆಪಿ ರಾಜ್ಯವನ್ನು ವಿಭಜಿಸಲು ಅಥವಾ ಕೇಂದ್ರಾಡಳಿತ ಪ್ರದೇಶವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇಂತಹ ಕೆಳಮಟ್ಟ ರಾಜಕಾರಣವನ್ನು ಖಂಡಿಸುತ್ತೇವೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಶ್ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಬಿಜೆಪಿಯ ಹಲವು ಹಿರಿಯ ಸಂಸದರು ಮತ್ತು ಶಾಸಕರು ಉತ್ತರ ಬಂಗಾಳವನ್ನು ವಿಭಜಿಸಿ ಹೊಸ ರಾಜ್ಯವನ್ನಾಗಿ ಅಥವಾ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಕುರಿತು ಸಾರ್ವಜನಿಕವಾಗಿಯೇ ವಾದಿಸಿದ್ದಾರೆ.
ಟಿಎಂಸಿ ನೇತೃತ್ವದ ಸರ್ಕಾರವು ಪೂರ್ಣ ಅವಧಿಯನ್ನು ಪೂರೈಸುವುದಿಲ್ಲ. ಸರ್ಕಾರ ಅಂತ್ಯಗೊಳ್ಳುವ ದಿನಗಳು ಸಮೀಪದಲ್ಲಿವೆ ಎಂದು ಪ್ರತಿಪಕ್ಷ ನಾಯಕ ಸುವೆಂದು ಅಧಿಕಾರಿ ತಿಳಿಸಿದ್ದಾರೆ.