ನವದೆಹಲಿ:ದೇಶ ವಿರೋಧಿ ಚಟುವಟಿಕೆಗಳು ಹಾಗೂ ಧಾರ್ಮಿಕ ಮತಾಂತರಗಳನ್ನು ನಡೆಸಲು ಕೆಲವು ಸರ್ಕಾರೇತರ ಸಂಸ್ಥೆಗಳು ವಿದೇಶಿ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಆರೋಪಿಸಿದ್ದಾರೆ.
ಕೆಲವು ಎನ್‌ಜಿಒಗಳು ಕಲ್ಯಾಣ ಯೋಜನೆಗಳಿಗೆ ರಾಜಕೀಯ ಪ್ರೇರಿತ ವಿರೋಧದಲ್ಲಿ ತೊಡಗಿವೆ ಹಾಗೂ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿವೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿಗಳು, ರಾಜ್ಯ ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರ ಎರಡು ದಿನಗಳ "ಚಿಂತನ್ ಶಿಬಿರ" ದ ಮೊದಲ ದಿನ ಗೃಹ ಸಚಿವರು ಈ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮವು ಹರ್ಯಾಣದ ಫರಿದಾಬಾದ್ ಜಿಲ್ಲೆಯ ಸೂರಜ್‌ಕುಂಡ್ ಪ್ರದೇಶದಲ್ಲಿ ನಡೆಯುತ್ತಿದೆ.
2020 ರಲ್ಲಿ ವಿದೇಶಿ ನಿಧಿಯ ದುರುಪಯೋಗವನ್ನು ತಡೆಗಟ್ಟಲು ಪರಿಣಾಮಕಾರಿ ಮೇಲ್ವಿಚಾರಣಾ ಕಾರ್ಯವಿಧಾನವನ್ನು ರಚಿಸಲು ಕೇಂದ್ರ ಸರಕಾರವು ಕಾನೂನು ತಿದ್ದುಪಡಿಯನ್ನು ಪರಿಚಯಿಸಿತು. ಇಂತಹ ದುರುಪಯೋಗವನ್ನು ತಡೆಯುವಲ್ಲಿ ನಾವು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದೇವೆ. ಇದರ ಬಗ್ಗೆ ನನಗೆ ಸಂತೋಷವಾಗಿದೆ ಎಂದರು.