ಚೆನ್ನೈ: ಬಲವಂತವಾಗಿ ಹಿಂದಿ ಹೇರಿಕೆ ಮಾಡಿ ಮತ್ತೊಂದು ಭಾಷಾ ಸಮರಕ್ಕೆ ಅವಕಾಶ ಮಾಡಿಕೊಡದಿರಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಬಳಸುವಂತೆ ಅಧಿಕೃತ ಭಾಷೆಯ ಕುರಿತಾದ ಸಂಸದೀಯ ಸಮಿತಿಯು ಮಾಡಿರುವ ಶಿಫಾರಸು 'ವಿಭಜಕ ಗುಣ'ದಿಂದ ಕೂಡಿದೆ.
ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಮಾಡಿ, ಮತ್ತೊಂದು ಭಾಷಾ ಸಮರಕ್ಕೆ ಹಾದಿ ಮಾಡಿಕೊಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಶಿಫಾರಸುಗಳು ವಾಸ್ತವಿಕವಾಗಿ ಕಾರ್ಯಸಾಧುವಲ್ಲ. ಒಂದು ವೇಳೆ ದೇಶದಲ್ಲಿ ಏಕರೂಪ ಭಾಷೆಯಾಗಿ ಹಿಂದಿ ಹೇರಿದರೆ, ಹಿಂದಿ ಬಲ್ಲವರು ಮಾತ್ರ ದೇಶದ ಸತ್ಪ್ರಜೆಗಳೆಂದು, ಹಿಂದಿ ಗೊತ್ತಿಲ್ಲದವರನ್ನು ದ್ವಿತೀಯ ದರ್ಜೆಯ ಪ್ರಜೆಗಳಾಗಿ ನಡೆಸಿಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.