ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ದಿನದಿಂದ ದಿನಕ್ಕೆ ಬಲಗೊಳ್ಳುತ್ತಲೇ ಇದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸಂಚರಿಸುತ್ತಿರುವ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಟ್ವೀಟ್ ಮಾಡಿರುವ ಅವರು, 'ಭಾರತ್ ಜೋಡೊ ಯಾತ್ರೆ ದಿನದಿಂದ ದಿನಕ್ಕೆ ಬಲಗೊಳ್ಳುತ್ತಲೇ ಇದೆ.
ನಾನು ರಾಹುಲ್ ಗಾಂಧಿ ಅವರೊಂದಿಗೆ ಮೈಸೂರಿನಿಂದ 5.5 ಕಿ.ಮೀ ಕ್ರಮಿಸಿದೆ. ಮಹಿಳೆಯರು ಮತ್ತು ಯುವಕರ ಸಂಖ್ಯೆ ಜಾಸ್ತಿಯಾಗಿದೆ. ಅಲ್ಲದೆ, ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಹರ್ಷೋದ್ಗಾರ ಮೊಳಗಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಪಾದಯಾತ್ರೆಯು ಸೋಮವಾರ ಶ್ರೀರಂಗಪಟ್ಟಣ ತಾಲ್ಲೂಕು ಕಳಸ್ತವಾಡಿ ಮೂಲಕ ಮಂಡ್ಯ ಜಿಲ್ಲೆ ತಲುಪಿದೆ.
ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇಂದು ರಾಜ್ಯಕ್ಕೆ ಬರಲಿದ್ದಾರೆ.
12.30ಕ್ಕೆ ಸೋನಿಯಾ ಗಾಂಧಿ ಮೈಸೂರು ತಲುಪುತ್ತಿದ್ದು ಸೋನಿಯಾ ಹಾಗೂ ರಾಹುಲ್ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ರಾಹುಲ್ ಗಾಂಧಿ ಶ್ರೀರಂಗಪಟ್ಟಣ ತಲುಪಲಿದ್ದಾರೆ.