ಬೀಜಿಂಗ್: ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸಲು ಶಿಕ್ಷಣದಲ್ಲಿ ದೇಶಭಕ್ತಿ ಪಾಠಗಳನ್ನು ವ್ಯಾಪಕಗೊಳಿಸಲಾಗುವುದು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿದ್ದಾರೆ.
ಭಾನುವಾರ ಬೀಜಿಂಗ್‌ನ 'ಗ್ರೇಟ್ ಹಾಲ್ ಆಫ್ ಪೀಪಲ್'ನಲ್ಲಿ ಆರಂಭಗೊಂಡ ಐದು ವರ್ಷಕ್ಕೊಮ್ಮೆ ನಡೆಯುವ ಕಮ್ಯುನಿಷ್ಟ್ ಪಾರ್ಟಿ ಕಾಂಗ್ರೆಸ್ ಮಹಾಧೀವೇಶನದಲ್ಲಿ ಜಿನ್‌ಪಿಂಗ್ ಈ ರೀತಿ ಹೇಳಿದ್ದಾರೆ.
'ನಾವು ಶಿಕ್ಷಣ ಹಾಗೂ ತಂತ್ರಜ್ಞಾನ ಸ್ವಾವಲಂಬನೆಗೆ ಆದ್ಯತೆ ನೀಡಬೇಕಿದೆ' ಎಂದು ಒತ್ತಿ ಹೇಳಿದ್ದಾರೆ.
'ಚೀನಾ ಜನರಿಗೆ ಸಮಾಜವಾದಿ ಸಮಾಜದೊಂದಿಗೆ ಹೊಂದಿಕೊಳ್ಳಲು ಮತ್ತು ಸಮಾಜವಾದಿ ತಳಹದಿಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಧರ್ಮವನ್ನು ಅಳವಡಿಸಿಕೊಳ್ಳುವುದನ್ನು ನಾವು ಉನ್ನತವಾಗಿ ಬೆಂಬಲಿಸುತ್ತೇವೆ. ನಮ್ಮ ಪಕ್ಷಕ್ಕೆ ಆರ್ಥಿಕ ಅಭಿವೃದ್ಧಿಯೇ ಪರಮ ಗುರಿ, ಪರದೇಶಗಳ ಜೊತೆ ನಮಗೆ ಬಹುತ್ವದ ಹಾಗೂ ಸುಸ್ಥಿರ ಆರ್ಥಿಕ ಸಂಬಂಧ ಬೇಕು' ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ತೈವಾನ್ ವಿಚಾರವನ್ನೂ ಮುಖ್ಯವಾಗಿ ಹೇಳಿರುವ ಚೀನಾ ಅಧ್ಯಕ್ಷರು, 'ತೈವಾನ್ ಮೇಲಿನ ನಮ್ಮ ಹಿಡಿತ ಚೀನಾ ಜನರಿಗೆ ಬಿಟ್ಟಿದ್ದು' ಎಂದು ಹೇಳಿದ್ದಾರೆ.