ಕಾಸರಗೋಡು: ಹೆಚ್ಚುತ್ತಿರುವ ಮಾದಕದ್ರವ್ಯ ವಿರೋಧಿ ಹೋರಾಟಕ್ಕೆ ಸಾಥ್ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಹೆಲ್ಮೆಟ್, ಮಾದಕ ವಸ್ತು ವಿರೋಧಿ ಸಂದೇಶದ ಟೀ ಶರ್ಟ್ ಧರಿಸಿ ಸೈಕಲನ್ನೇರಿ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾಸರಗೋಡು ಪೆಡಲರ್ಸ್, ಸೈಕ್ಲಿಸ್ಟ್ ಸಂಘದ ಕಾರ್ಯಕರ್ತರೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ವಾರ್ತಾ ಕಚೇರಿ ವತಿಯಿಂದ ಗಾಂಧಿ ಜಯಂತಿ ಸಪ್ತಾಹದ ಅಂಗವಾಗಿ ಮಾರಕ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಿಂದ ನಾಯಮ್ಮರ್‍ಮೂಲೆ ತನ್‍ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯವರೆಗಿನ ಸೈಕಲ್ ರ್ಯಾಲಿಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಕಾಸರಗೋಡಿನ ಪೆಡಲರುಗಳೊಂದಿಗೆ ತನ್‍ಬಿಹುಲ್ ಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳು(ಎಸ್‍ಪಿಸಿ) ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಹೊಸ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಸೈಕ್ಲಾಥಾನ್ ಧ್ವಜಾರೋಹಣ ಸಮಾರಂಭವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಉಪ ಅಬಕಾರಿ ಆಯುಕ್ತ ಡಿ.ಬಾಲಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಸಹಾಯಕ ಸಂಪಾದಕ ಜಿ.ಎನ್.ಪ್ರದೀಪ್ ವಂದಿಸಿದರು. ಕಾಸರಗೋಡು ವ್ಯಾಪಾರಿಗಳ ಪ್ರೀತಿಯ ಉಡುಗೊರೆಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.
ಮಾದಕ ದ್ರವ್ಯದ ವಿರುದ್ಧ ಅಭಿಯಾನ: ಸೈಕಲ್ ಸವಾರಿಯೊಂದಿಗೆ ರ್ಯಾಲಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ
0
ಅಕ್ಟೋಬರ್ 08, 2022