ಚೆನ್ನೈ: ಚೆನ್ನೈನ 'ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ'ಯಲ್ಲಿ ಕಳೆದ ಶನಿವಾರ ನಡೆದ ನಿರ್ಗಮನ ಪಥಸಂಚಲನದ ನಂತರ 151 ಪುರುಷ ಕೆಡೆಟ್‌ಗಳು ಮತ್ತು 35 ಮಹಿಳಾ ಕೆಡೆಟ್‌ಗಳೂ ಸೇರಿದಂತೆ ಒಟ್ಟು 186 ಅಧಿಕಾರಿಗಳು ಭಾರತೀಯ ಸೇನೆಗೆ ಸೇರ್ಪಡೆಗೊಂಡರು.
ಇದರಲ್ಲಿ 36 ವಿದೇಶಿ ಕೆಡೆಟ್‌ಗಳೂ ಸಹ ಸೇರಿದ್ದರು.
ಕೆಡೆಟ್ ಹರ್ವೀನ್ ಕೌರ್ ಎಂಬುವವರ ಪತಿ ಮೇಜರ್ ಕೆಪಿಎಸ್ ಕಹ್ಲೋನ್ ಅವರು ಕರ್ತವ್ಯ ನಿರ್ವಹಣೆ ಸಂದರ್ಭದಲ್ಲೇ ಹುತಾತ್ಮರಾಗಿದ್ದರು. ಪತಿಯ ಅಗಲಿಕೆ ನಂತರ, ಹರ್ವೀನ್ ಅವರು ಸೇನೆ ಸೇರುವ ನಿರ್ಧಾರ ಕೈಗೊಂಡು, ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಅವರು ಈಗ ದೇಶ ಸೇವೆಗೆ ನಿಯೋಜನೆಗೊಂಡಿದ್ದಾರೆ.
11 ತಿಂಗಳ ಕಠಿಣ ತರಬೇತಿಯ ನಂತರ, ಹರ್ವೀನ್ ಅವರು ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
2019 ರಲ್ಲಿ ನಿಧನರಾದ ತಮ್ಮ ಪತಿ ಮೇಜರ್ ಕೆಪಿಎಸ್ ಕಹ್ಲೋನ್ ಅವರನ್ನು ಅನುಸರಿಸುವುದಾಗಿ ಕೆಡೆಟ್ ಹರ್ವೀನ್ ಕೌರ್ ಕಹ್ಲೋನ್ ಹೇಳಿಕೊಂಡಿದ್ದಾರೆ.
ಹುತಾತ್ಮ ಮೇಜರ್ ಕೆಪಿಎಸ್ ಕಹ್ಲೋನ್ ಅವರು '129 ಎಸ್‌ಎಟಿಎ ರೆಜಿಮೆಂಟ್'ನ ಫಿರಂಗಿ ಅಧಿಕಾರಿಯಾಗಿದ್ದರು.
ನಿರ್ಗಮನ ಪಥಸಂಚಲನವನ್ನು ರಾಯಲ್ ಭೂತಾನ್ ಆರ್ಮಿ ಚೀಫ್ ಆಪರೇಷನ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಬಟೂ ಶೆರಿಂಗ್ ವೀಕ್ಷಿಸಿದರು. ಅವರು ಅಕಾಡೆಮಿಯ ಕೆಡೆಟ್‌ಗಳನ್ನು ಶ್ಲಾಘಿಸಿದರು ಮತ್ತು ನಿಸ್ವಾರ್ಥ ಸೇವೆಯ ಮಿಲಿಟರಿ ಮೌಲ್ಯಗಳಿಗೆ ಬದ್ಧರಾಗಿರಲು ಸಲಹೆ ನೀಡಿದರು.