ಲಂಡನ್: ಬ್ರಿಟನ್‌ನ ನೂತನ ಪ್ರಧಾನಿ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ 44 ದಿನಕ್ಕೆ ಟ್ರಸ್ ರಾಜಿನಾಮೆ ನೀಡಿದ್ದಾರೆ.
ಆರ್ಥಿಕ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲರಾಗಿದ್ದರಿಂದ ರಾಜಿನಾಮೆ ನೀಡಿದ್ದಾಗಿ ಲಿಜ್ ಟ್ರಸ್ ಹೇಳಿದ್ದಾರೆ. ಬ್ರಿಟನ್‌ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಲಿದೆ. ಮಾಜಿ ಹಣಕಾಸು ಸಚಿವ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿ ರೇಸ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಸರ್ಕಾರಕ್ಕೆ ಹಿರಿಯ ಸಚಿವರೊಬ್ಬರು ರಾಜೀನಾಮೆ ನೀಡಿರುವುದು, ಸಂಸತ್ತಿನ ಕೆಳಮನೆಯಲ್ಲಿ ಸದಸ್ಯರ ತೀವ್ರ ಟೀಕೆಗಳ ವ್ಯಕ್ತವಾಗಿದ್ದು ಆ ಬಳಿಕ ಟ್ರಸ್ ಕಚೇರಿಯಲ್ಲಿ ಮುಂದುವರಿಯುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಕಳೆದ ತಿಂಗಳು ಸರ್ಕಾರವು ಆರ್ಥಿಕ ಯೋಜನೆಯನ್ನು ಮಂಡಿಸಿತು. ಅದರ ವೈಫಲ್ಯವು ಆರ್ಥಿಕ ಪ್ರಕ್ಷುಬ್ಧತೆ ಮತ್ತು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಯಿತು.
ಭಾರತೀಯ ಮೂಲದ ಬ್ರಿಟನ್ನಿನ ಗೃಹ ಸಚಿವೆ ಸುಯೆಲ್ಲಾ ಬ್ರಾವರ್‌ಮನ್ ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 43 ದಿನಗಳ ಹಿಂದೆ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅಧಿಕಾರ ವಹಿಸಿಕೊಂಡಾಗ ಗೃಹ ಕಾರ್ಯದರ್ಶಿಯಾಗಿ ಬ್ರಾವರ್ ಮನ್ ನೇಮಕಗೊಂಡಿದ್ದರು. ಬುಧವಾರ ಟ್ರಸ್ ಜೊತೆಗೆ ಮುಖಾಮುಖಿ ಸಭೆ ನಂತರ ಅವರು ಗೃಹ ಕಾರ್ಯದರ್ಶಿ ಹುದ್ದೆ ತೊರೆದಿದ್ದರು.
ಹೊಸ ಮಾರುಕಟ್ಟೆಯ ಅವ್ಯವಸ್ಥೆಯನ್ನು ತಪ್ಪಿಸಲು ಕಳೆದ ತಿಂಗಳು ಘೋಷಿಸಲಾಗಿದ್ದ ತನ್ನ ಎಲ್ಲಾ ಸಾಲ-ಇಂಧನ ತೆರಿಗೆ ಕಡಿತಗಳನ್ನು ಬ್ರಿಟಿಷ್ ಸರ್ಕಾರ ರದ್ದುಗೊಳಿಸಿತ್ತು. ಇದು ಪ್ರಧಾನಿ ಲಿಜ್ ಟ್ರಸ್ ಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ವಜಾಗೊಂಡ ಕ್ವಾಸಿ ಕ್ವಾರ್ಟೆಂಗ್ ಅವರ ಸ್ಥಾನಕ್ಕೆ ಶುಕ್ರವಾರದಂದು ಬಂದ ನೂತನ ಹಣಕಾಸು ಮುಖ್ಯಸ್ಥ ಜೆರೆಮಿ ಹಂಟ್‌ರ ಆಘಾತಕಾರಿ ಕ್ರಮದಿಂದ ಲೀಜ್ ಸ್ಥಾನ ಅನಿಶ್ಚಿತತೆಗೆ ಸಿಲುಕಿಸಿತ್ತು.