ನವದೆಹಲಿ: ದೇಶೀಯ ನಿರ್ಮಿತ ಹಗುರ ಯುದ್ಧ ಹೆಲಿಕಾಪ್ಟರ್ (LCH) ನ್ನು ಸೋಮವಾರ ಭಾರತೀಯ ವಾಯುಪಡೆಗೆ(IAH) ಸೇರಿಸಲಾಗಿದೆ. 1999ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅದರ ಅಗತ್ಯವನ್ನು ಮನಗಂಡ ನಂತರ ಮೂಲಭೂತವಾಗಿ ಪರ್ವತ ಯುದ್ಧಕ್ಕಾಗಿ ಅಭಿವೃದ್ಧಿಪಡಿಸಲಾದ ಸ್ಥಳೀಯವಾಗಿ ನಿರ್ಮಿಸಲಾದ ಲಘು ಯುದ್ಧ ಹೆಲಿಕಾಪ್ಟರ್ (LCH) ಇದಾಗಿದೆ. ಪ್ರಚಂಡ ಎಂದು ಇದಕ್ಕೆ ಹೆಸರಿಡಲಾಗಿದೆ.
ಸರ್ಕಾರಿ-ಚಾಲಿತ ವಾಯುಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿಪಡಿಸಿದ 5.8-ಟನ್ ತೂಕದ ಅವಳಿ-ಎಂಜಿನ್ ಗನ್‌ಶಿಪ್ ಹೆಲಿಕಾಪ್ಟರ್ ಗಾಳಿಯಿಂದ ಗಾಳಿಗೆ ಕ್ಷಿಪಣಿಗಳು, 20 ಎಂಎಂ ಟರ್ರೆಟ್ ಗನ್‌ಗಳು, ರಾಕೆಟ್ ಸಿಸ್ಟಮ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಹೊಂದಿ ಶಸ್ತ್ರಸಜ್ಜಿತವಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ಇತರ ಹಿರಿಯ ಮಿಲಿಟರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜೋಧ್‌ಪುರ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕು ಹೆಲಿಕಾಪ್ಟರ್‌ಗಳನ್ನು ಐಎಎಫ್‌ಗೆ ಸೇರ್ಪಡೆಗೊಳಿಸಲಾಯಿತು.