ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪ್ರಧಾನ ಕಾರ್ಯದರ್ಶಿ ಆಗಿದ್ದ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಭಾಗಿಯಾಗಿದ್ದಾರೆ ಎನ್ನಲಾಗಿರುವ ಚಿನ್ನ ಕಳ್ಳಸಾಗಾಣೆ ಮೊಕದ್ದಮೆ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ಮೊಕದ್ದಮೆಯ ತನಿಖೆ ನಡೆಸಲು ಕೇರಳ ಸರ್ಕಾರ ಆಯೋಗವೊಂದನ್ನು ರಚಿಸಿದೆ ಎಂದು ಹೇಳಿದೆ.
ಕೇರಳ ಸರ್ಕಾರದಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ್ದವರು ಈ ಮೊಕದ್ದಮೆಯಲ್ಲಿ ಭಾಗಿಯಾಗಿದ್ದಾರೆ. ಅವರು ಆಡಳಿತ ಯಂತ್ರವನ್ನು ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತನಿಖೆಯ ಹಳಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಇ.ಡಿ ಆರೋಪಿಸಿದೆ. ಕೇರಳದಲ್ಲಿ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲದ ಕಾರಣ ಮೊಕದ್ದಮೆಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸುವಂತೆ ಇ.ಡಿ ಕೋರ್ಟನ್ನು ಕೋರಿದೆ.
ಮೊಕದ್ದಮೆ ಸಂಬಂಧಿಸಿ ತನಿಖೆ ಜಾರಿಯಲ್ಲಿರುವಾಗಲೇ ಕೇರಳ ಮುಖ್ಯಮಂತ್ರಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆಡಳಿತ ಯಂತ್ರವು ಇ.ಡಿ. ವಿರುದ್ಧ ತಿರುಗಿಬಿದ್ದಿದೆ ಮತ್ತು ತನಿಖೆಯ ಹಳಿತಪ್ಪಿಸಲು ಆರೋಪಿಗಳನ್ನು ಪ್ರಭಾವಿಸಿ ಸುಳ್ಳು ಮೊಕದ್ದಮೆಗಳನ್ನು ರಾಜ್ಯ ಸರ್ಕಾರದ ಆಯೋಗ ದಾಖಲಿಸಿದೆ ಎಂದು ಹೇಳಿದೆ. ಕೇರಳ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಫಿಡವಿಟ್‌ನಲ್ಲಿ ಹೇಳಿದೆ.