ಮಧೂರು: ತೆಂಕುತಿಟ್ಟು ಯಕ್ಷಗಾನದ ಮೂಲನೆಲ ಕುಂಬಳೆ ಸೀಮೆಯ ಮಧೂರು ಪರಿಸರದಲ್ಲಿ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಿ ಸದಭಿರುಚಿಯ ಪ್ರದರ್ಶನಗಳನ್ನು ಆಯೋಜಿಸುವ ಉದ್ದೇಶದೊಂದಿಗೆ ಯಕ್ಷಕಲಾಕೌಸುಭ ಮಧೂರು ಎಂಬ ನೂತನ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಪರಕ್ಕಿಲ ಶ್ರೀ ಮಹಾದೇವ ಸನ್ನಿಧಿಯ ನಟರಾಜ ಮಂಟಪದಲ್ಲಿ ಯಕ್ಷಗಾನ ಬಯಲಾಟದೊಂದಿಗೆ ಭಾನುವಾರ ನಡೆದ ಸಮಾರಂಭದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರು ದೀಪಬೆಳಗಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಖ್ಯಾತ ಜ್ಯೋತಿಷಿ ನಾರಾಯಣ ರಂಗಾಭಟ್ಟ ಮಧೂರು, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಪ್ರ. ಸಂಪಾದಕ, ಲೇಖಕ ಎಂ.ನಾ. ಚಂಬಲ್ತಿಮಾರ್, ಹಿರಿಯ ವೇಷಧಾರಿ ರಾಧಾಕೃಷ್ಣ ನಾವಡ ಮಧೂರು, ವೇದಮೂರ್ತಿ ರಾಮಪ್ರಕಾಶ ತುಂಗ ಮಧೂರು ಪಾಲ್ಗೊಂಡರು. ವಿದ್ಯಾರ್ಥಿಗಳಿಬ್ಬರಿಗೆ ಶೈಕ್ಷಣಿಕ ಪ್ರೋತ್ಸಾಹಕವಾಗಿ ಆರ್ಥಿಕ ಸಹಾಯ ಮತ್ತು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿರುವ ಯಕ್ಷಗಾನದ ಹಾಸ್ಯಗಾರ ಭಾಗಮಂಡಲ ಮಹಾಬಲೇಶ್ವರ ಭಟ್ಟರ ಚಿಕಿತ್ಸಾ ಸಹಾಯಕ್ಕೆ ಕಲಾಗೌರವ ರೂಪದಲ್ಲಿ ಅನುದಾನ ನೀಡಲಾಯಿತು.
ಮಧೂರು ಪರಿಸರದ ಸಮಾನಾಸಕ್ತರಾದ ಮೂವತ್ತರಷ್ಟು ಗೆಳೆಯರು ಜೊತೆಗೂಡಿ "ಯಕ್ಷಕಲಾ ಕೌಸ್ತುಭ' ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸಮಾಜದ ಅಶಕ್ತ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವುದು ಮತ್ತು ಅಶಕ್ತ ಕಲಾವಿದರಿಗೆ ನೆರವು ನೀಡುವುದರೊಂದಿಗೆ ವರ್ಷಂಪ್ರತಿ ಉತ್ಕøಷ್ಟ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿ ಕಲೆಯನ್ನು ಹೊಸಪೀಳಿಗೆಗೆ ಕೈ ದಾಟಿಸಿ, ಅವರಲ್ಲಿ ಕಲಾಪ್ರೀತಿಯ ಅಭಿರುಚಿ ಮೂಡಿಸುವುದು ಉದ್ದೇಶವಾಗಿದೆ. ಖ್ಯಾತ ಕಲಾವಿದ ವಾಸುದೇವ ರಂಗಾಭಟ್ಟ ಮಧೂರು ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಲಾವಿದ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತೆಂಕುತಿಟ್ಟಿನ ಆಯ್ದ ಪ್ರಸಿದ್ಧ ಕಲಾವಿದರಿಂದ 'ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರಸ್ತುತಗೊಂಡಿತು.
ಈ ಪ್ರಸಂಗವು ಇತರ ಕ್ಷೇತ್ರಮಹಾತ್ಮೆ ಪ್ರಸಂಗಗಳಿಗಿಂತ ಭಿನ್ನವಾಗಿದ್ದು, ವೈಚಾರಿಕತೆ ಯೊಂದಿಗೆ ಧರ್ಮಸೂಕ್ಷ್ಮ ಸಂದೇಶಗಳಿವೆ. ತೆಂಕುತಿಟ್ಟಿನ ಎಲ್ಲಾ ಬಗೆಯ ಪಾತ್ರವೈವಿಧ್ಯಗಳಿದ್ದು ಕಲಾವಿದರು ಸೊಗಸಾಗಿ ಪ್ರದರ್ಶನವಿತ್ತಿದ್ದಾರೆ. ಅತಿರೇಕಗಳಿಲ್ಲದೇ, ಆಭಾಸಗಳಿಲ್ಲದೇ ಕಥೆಯ ಬಿಗಿಯನ್ನು ಕಾಪಾಡಿಕೊಂಡ ಪ್ರದರ್ಶನ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.
ಮಧೂರಿನಲ್ಲಿ 'ಯಕ್ಷಕಲಾ ಕೌಸ್ತುಭ' ನೂತನ ಸಂಸ್ಥೆ ಅಸ್ತಿತ್ವಕ್ಕೆ
0
ಅಕ್ಟೋಬರ್ 31, 2022
Tags