ಉಪ್ಪಳ: ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಸ್ತ್ರಮೇಳದಲ್ಲಿ ಬೃಹತ್ ಚಪ್ಪರ ಕುಸಿದು ಹಲವರು ಗಾಯಗೊಂಡ ಕಳವಳಕಾರಿ ಘಟನೆ ಈಗ್ಗೆ ಅಲ್ಪಹೊತ್ತಿನ ಮೊದಲು ಉಂಟಾಗಿ ಗಾಬರಿಗೊಳಿಸಿದೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಮಕ್ಕಳ ಶಾಸ್ತ್ರ ಮೇಳ ನಿನ್ನೆ ಹಾಗೂ ಇಂದು ಉಪ್ಪಳ ಸಮೀಪದ ಬಾಯಾರು ರಸ್ತೆಯ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಉಪಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಲ್ಲಾ ಶಾಲೆಗಳ ಮೂರು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಈ ಸಮಾರಂಭಕ್ಕೆ ಶಾಲಾ ಮೈದಾನದಲ್ಲಿ ಅಳವಡಿಸಲಾದ ಬೃಹತ್ ಚಪ್ಪರ ಕುಸಿದಿದ್ದು ಆತಂಕ ಮೂಡಿಸಿದೆ. ಈ ವೇಳೆ ಚಪ್ಪರದಡಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿದ್ದು, ಹಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಗಾಯಗೊಂಡವರನ್ನು ಉಪ್ಪಳ, ಮಂಗಲ್ಪಾಡಿಗಳ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಮಂಗಳೂರಿನ ಆಸ್ಪತ್ರೆಗೂ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.