ನವದೆಹಲಿ :ಪೌರತ್ವ ತಿದ್ದುಪಡಿ ಕಾಯಿದೆಯು ಭಾರತೀಯ ನಾಗರಿಕರ ಕಾನೂನಾತ್ಮಕ, ಪ್ರಜಾಸತ್ತಾತ್ಮಕ ಅಥವಾ ಜಾತ್ಯತೀತ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಭಾರತೀಯ ಪೌರತ್ವ ಪಡೆಯುವ ಈಗಿನ ನಿಯಮವನ್ನು ಈ ಕಾಯಿದೆ ಮುಟ್ಟಿಲ್ಲ ಎಂದು ತನ್ನ ಅಫಿಡವಿಟ್‍ನಲ್ಲಿ ಸರಕಾರ ಹೇಳಿದೆಯಲ್ಲದೆ ಪೌರತ್ವ ಪಡೆಯುವ ನಿಯಮಗಳು ಹಿಂದಿನಂತೆಯೇ ಇದೆ ಹಾಗೂ ಕಾನೂನಿನಲ್ಲಿ ಉಲ್ಲೇಖಿಸಲಾಗಿರುವ ಮೂರು ದೇಶಗಳ ಸಹಿತ ಜಗತ್ತಿನ ಯಾವುದೇ ದೇಶಗಳವರಿಗೆ ಭಾರತೀಯ ಪೌರತ್ವ ನಿಯಮಗಳು ಒಂದೇ ಆಗಿವೆ ಎಂದು ಸರಕಾರ ತಿಳಿಸಿದೆ.
ಪೌರತ್ವ ತಿದ್ದುಪಡಿ ಕಾಯಿದೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಜಾಗೊಳಿಸುವಂತೆಯೂ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದೆ.
ಈ ಕಾಯಿದೆಯ ವಿರುದ್ಧ 200 ಕ್ಕೂ ಅಧಿಕ ಅರ್ಜಿಗಳು ಸುಪ್ರೀಂ ಕೋರ್ಟಿನ ಮುಂದೆ ಇವೆ. ಈ ಕಾಯಿದೆಯು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತಿದೆ ಹಾಗೂ ಸಂವಿಧಾನದ 14 ನೇ ವಿಧಿಗೆ ವಿರುದ್ಧವಾಗಿವೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ನಿರ್ದಿಷ್ಟ ದೇಶಗಳ ನಿರ್ದಿಷ್ಟ ಸಮುದಾಯಗಳಿಗೆ ಒಂದು ರೀತಿಯ ಸಹಾಯದಂತೆ ಕಾಯಿದೆಯು ಕೆಲವೊಂದು ವಿನಾಯಿತಿಗಳನ್ನು ನೀಡಲು ಉದ್ದೇಶಿಸಿದೆ ಹಾಗೂ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧರ್ಮದ ಆಧಾರದಲ್ಲಿ ದೌರ್ಜನ್ಯಕ್ಕೊಳಗಾಗುವವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ ಎಂದು ಸರಕಾರ ಹೇಳಿದೆ.
ಈ ಕಾಯಿದೆಯು ಅಸ್ಸಾಂಗೆ ಅಕ್ರಮ ವಲಸೆಯನ್ನು ಉತ್ತೇಜಿಸುವುದಿಲ್ಲ ಇಂತಹ ಭೀತಿ ಊಹಾತ್ಮಕವಾಗಿದೆ ಎಂದು ಸರ್ಕಾರ ಹೇಳಿದೆ. ಪ್ರಕರಣದ ವಿಚಾರಣೆ ಇಂದು ಮುಂದುವರಿಯುವ ನಿರೀಕ್ಷೆಯಿದೆ.