ನವದೆಹಲಿ: ಜೆಇಇ ಮೇನ್ಸ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ರಷ್ಯಾ ಪ್ರಜೆಯನ್ನು ಕೇಂದ್ರೀಯ ತನಿಖಾ ದಳ (CBI) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜೆಇಇ ಮೇನ್ಸ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ಭಾರತಕ್ಕೆ ಬಂದಿಳಿದ ರಷ್ಯಾದ ನಾಗರಿಕರೊಬ್ಬರನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ರಷ್ಯಾದ ಪ್ರಜೆ ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕೇಂದ್ರೀಯ ತನಿಖಾ ದಳ (ಸಿಬಿಐ) ಗೆ ಕೇಂದ್ರೀಯ ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಈ ವ್ಯಕ್ತಿಯ ಕುರಿತು ಸಿಬಿಐ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಈತನೇ ಮುಖ್ಯ ಹ್ಯಾಕರ್ ಆಗಿದ್ದ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
ವಶಕ್ಕೆ ಪಡೆದ ನಂತರ ರಷ್ಯಾ ನಾಗರಿಕನನ್ನು ತನಿಖೆಗೆ ಒಳಪಡಿಸಲಾಗಿದೆ. ಈತನನ್ನು ಬಂಧಿಸುವ ಸಾಧ್ಯತೆ ಇದೆ. ಬಂಧಿತ ಆರೋಪಿಯನ್ನು ತಕ್ಷಣವೇ ಸಿಬಿಐ ವಶಕ್ಕೆ ಪಡೆದಿದ್ದು, ಜೆಇಇ ಮ್ಯಾನಿಪ್ಯುಲೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಜೆನ್ಸಿಯಿಂದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ತನಿಖಾ ಸಂಸ್ಥೆ ಅಫಿನಿಟಿ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಮೂವರು ನಿರ್ದೇಶಕರಾದ ಸಿದ್ಧಾರ್ಥ್ ಕೃಷ್ಣ, ವಿಶ್ವಂಭರ್ ಮಣಿ ತ್ರಿಪಾಠಿ ಮತ್ತು ಗೋವಿಂದ್ ವರ್ಷ್ನಿ ವಿರುದ್ಧ ಪ್ರಕರಣ ದಾಖಲಿಸಿತ್ತು.