ನವದೆಹಲಿ:ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೆಮ್ಮಿನ ಔಷಧಿ ಭಾರತದಲ್ಲಿ ಮಾರಾಟವಾಗುತ್ತಿಲ್ಲ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಹೇಳಿಕೆ ನೀಡಿದೆ. ಆದರೆ ಇದೇ ಕಂಪೆನಿ ಕಳಪೆ ಗುಣಮಟ್ಟದ ಔಷಧವನ್ನು ದೇಶದಲ್ಲಿ ಉತ್ಪಾದಿಸುತ್ತಿದ್ದ ಕಾರಣಕ್ಕಾಗಿ 2011ರಲ್ಲೇ ಬಿಹಾರದಲ್ಲಿ ಕಪ್ಪುಪಟ್ಟಿಗೆ ಸೇರಿತ್ತು ಎನ್ನುವ ಅಂಶ ಬಹಿರಂಗವಾಗಿದೆ.
ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಈ ಔಷಧಿಗಳಲ್ಲಿ ಸ್ವೀಕಾರಾರ್ಹವಲ್ಲದ ಪ್ರಮಾಣದಲ್ಲಿದ್ದ ಡೈಥಿಲೀನ್ ಗ್ಲೈಕೊಲ್ (diethylene glycol) ಮತ್ತು ಎಥಿಲೀನ್ ಗ್ಲೈಕೊಲ್ (ethylene glycol) ಇದ್ದುದೇ ಕಾರಣ ಎನ್ನಲಾಗಿದ್ದು, ಇದು 2020ರ ಜನವರಿಯಲ್ಲಿ ಜಮ್ಮುವಿನಲ್ಲೂ ಮಕ್ಕಳ ಸಾವಿಗೆ ಕಾರಣವಾಗಿತ್ತು ಎಂಬ ಅಂಶದ ಬಗ್ಗೆ CDSCO ತಿಳಿಸಿದೆ. ಜಮ್ಮುವಿನಲ್ಲಿ ಮಕ್ಕಳ ಸಾವಿಗೆ ಕಾರಣವಾದ DEG ಅಂಶ ಹಿಮಾಚಲ ಪ್ರದೇಶದ ಮೆಸಸ್ ಡಿಜಿಟಲ್ ವಿಷನ್ ಎಂಬ ಕಂಪನಿ ಉತ್ಪಾದಿಸಿದ ಸಿರಪ್‍ನಲ್ಲಿ ಕಂಡುಬಂದಿತ್ತು.
ಔಷಧ ಮತ್ತು ಪ್ರಸಾದನಗಳ ಕಾಯ್ದೆ-1940ರ ಪ್ರಕಾರ, ಸಾವಿಗೆ ಕಾರಣವಾಗುವ ವಿಷಪೂರಿತ ಔಷಧಿಗಳನ್ನು ಉತ್ಪಾದಿಸುವ ಅಪರಾಧಿಗಳಿಗೆ 10 ವರ್ಷಗಳಿಂದ ಹಿಡಿದು ಜೀವಾವಧಿ ಶಿಕ್ಷೆವರೆಗೆ ಹಾಗೂ 10 ಲಕ್ಷ ರೂ. ದಂಡದಿಂದ ಹಿಡಿದು ಮುಟ್ಟುಗೋಲು ಹಾಕಿಕೊಂಡ ಔಷಧಿಯ ಮೂರು ಪಟ್ಟು ದಂಡ ವಿಧಿಸಲು ಅವಕಾಶವಿದೆ. ಆದರೆ ಇಂದಿನವರೆಗೆ ಡಿಜಿಟಲ್ ವಿಷನ್‍ನ ಯಾರಿಗೂ ಶಿಕ್ಷೆ ವಿಧಿಸಲಾಗಿಲ್ಲ ಹಾಗೂ ಎಲ್ಲ ಆರೋಪಿಗಳು ಜಾಮೀನು ಪಡೆದಿದ್ದಾರೆ. ಮೇಡನ್ ಫಾರ್ಮಸ್ಯೂಟಿಕಲ್ಸ್ ಕಂಪೆನಿಯಂತೆ ಡಿಜಿಟಲ್ ವಿಷನ್ ಕೂಡಾ ಪದೇ ಪದೇ ಇಂಥ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದು, 2014ರಿಂದ 2019ರ ನಡುವೆ ಕಳಪೆ ಗುಣಮಟ್ಟದ ಏಳು ಪ್ರಕರಣಗಳಲ್ಲಿ ಸಿಲುಕಿಕೊಂಡಿತ್ತು.
ಕಳಪೆ ಗುಣಮಟ್ಟದ ಔಷಧಿ ಪೂರೈಸಿದ ಅರೋಪದಲ್ಲಿ 2014ರಲ್ಲಿ ವಿಯೇಟ್ನಾಂನಲ್ಲಿ ನಿಷೇಧ ಪಟ್ಟಿಗೆ ಸೇರಿದ್ದ 39 ಭಾರತೀಯ ಕಂಪನಿಗಳಲ್ಲಿ ಮೇಡನ್ ಫಾರ್ಮಸ್ಯೂಟಿಕಲ್ಸ್ ಕೂಡಾ ಸೇರಿತ್ತು. 2017ರಲ್ಲಿ ಈ ಕಂಪೆನಿಯ ಉತ್ಪನ್ನಗಳು ಕಳಪೆ ಎನ್ನುವುದು ಗುಜರಾತ್‍ನಲ್ಲಿ ಕಂಡುಬಂದಿತ್ತು. ಕೇರಳದಲ್ಲಿ ಕೂಡಾ ಕಂಪೆನಿಗೆ ಶಿಕ್ಷೆಯಾಗಿತ್ತು. ಆದಾಗ್ಯೂ ರಾಜ್ಯದಲ್ಲಿ ಇದು ಔಷಧಿಗಳನ್ನು ಪೂರೈಸುತ್ತಿತ್ತು. 2021 ಮತ್ತು 2022ರಲ್ಲಿ ಕೇರಳದಲ್ಲಿ ಇಂಥ ಕನಿಷ್ಠ 5 ಪ್ರಕರಣಗಳಲ್ಲಿ ಕಂಪೆನಿ ಸಿಲುಕಿಕೊಂಡಿತ್ತು ಎಂದು timesofindia.com ವರದಿ ಮಾಡಿದೆ.