ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನು ಆಧಾರದ ಮೇಲೆ 16 ವರ್ಷ ವಯಸ್ಸಿನ ಬಾಲಕಿಯ ಮದುವೆಯನ್ನು ಮಾನ್ಯ ಮಾಡಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಅರ್ಜಿ ಸಲ್ಲಿಸಿದೆ.ಈ ಅರ್ಜಿಯನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
'ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದ್ದನ್ ಲಾ' ಎಂಬ ಪುಸ್ತಕವನ್ನು ಉಲ್ಲೇಖಿಸಿ ಬಾಲಕಿಯ ಮದುವೆಯನ್ನು ಮಾನ್ಯ ಮಾಡಿ ಜೂನ್ 13ರಂದು ಹೈಕೋರ್ಟ್ ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಎನ್‌ಸಿಪಿಸಿಆರ್, ಮಕ್ಕಳನ್ನು ಲೈಂಗಿಕ ಅಪರಾಧದಿಂದ ರಕ್ಷಿಸುವ ಕಾಯ್ದೆ ನೀಡಿರುವ ನಿಬಂಧನೆಗಳ ಹೊರತಾಗಿಯೂ 15 ವರ್ಷ ಅಥವಾ ಪ್ರೌಢಾವಸ್ಥೆಗೆ ಬಂದಿರುವ ಮುಸ್ಲಿಂ ಹುಡುಗಿ ಮದುವೆ ಆಗಲು ಅಡ್ಡಿ ಇಲ್ಲ ಎಂಬ ಅಂಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದು ಹೇಳಿದೆ.
ಎನ್‌ಸಿಪಿಸಿಆರ್ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಮತ್ತು ಅಭಯ್ ಎಸ್ ಓಕ ಅವರಿದ್ದ ಪೀಠಕ್ಕೆ ಸಲ್ಲಿಸಿದರು. ಮುಸ್ಲಿಂ ದಂಪತಿಗೆ ನೀಡಿರುವ ರಕ್ಷಣೆ ವಿರುದ್ಧವಾಗಿ ತಾವು ಇಲ್ಲ. ಆದರೆ ಕಾನೂನು ನಿಬಂಧನೆಗೆ ವಿರುದ್ಧವಾಗಿ ಕೋರ್ಟ್ ಆದೇಶ ನೀಡಿರುವುದರಿಂದ ಇದೊಂದು ಮುಖ್ಯ ಸಮಸ್ಯೆಯಾಗಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದರು.
ಬಾಲ್ಯವಿವಾಹ ನಿಷೇಧ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಪೋಸ್ಕೊ) ಮೇಲೆ ಈ ಆದೇಶವು ಗಂಭೀರ ಪರಿಣಾಮ ಬೀರುತ್ತದೆ ಎಂದ ಮೆಹ್ತಾ ಅವರು, ಹೈಕೋರ್ಟ್ ಆದೇಶದಲ್ಲಿರುವ ಎರಡು ಪ್ಯಾರಾಗಳಿಗೆ ತಡೆ ನೀಡುವಂತೆ ಅವರು ಕೋರ್ಟ್‌ಗೆ ಮನವಿ ಮಾಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಇತರರಿಗೆ ನೋಟಿಸ್ ನೀಡುವುದಾಗಿ ಮತ್ತು ಹಿರಿಯ ವಕೀಲ ರಾಜಶೇಖರ್ ರಾವ್ ಅವರನ್ನು ಈ ಮೊಕದ್ದಮೆಯಲ್ಲಿ ಅಮಿಕಸ್ ಕ್ಯೂರಿಯನ್ನಾಗಿ ನೇಮಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ, ನವೆಂಬರ್ 7ರಂದು ಅರ್ಜಿಯನ್ನು ಪರಿಶೀಲಿಸುವುದಾಗಿ ಹೇಳಿದೆ.
ಬಾಲಕಿಯ ಮದುವೆಯನ್ನು ಮಾನ್ಯ ಮಾಡಿದ್ದು ಬಾಲವಿವಾಹ ನಿಷೇಧ ಕಾಯ್ದೆ- 2006ರ ಉಲ್ಲಂಘನೆ ಆಗುತ್ತದೆ. ಅಪ್ರಾಪ್ತ ವಯಸ್ಸಿನ ಹುಡುಗಿ ಜೊತೆ ಲೈಂಗಿಕ ಕ್ರಿಯೆಯು ಪೋಸ್ಕೊ ಅಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲ್ಪಡುತ್ತದೆ. ಬಾಲಕಿಗೆ ಮದುವೆಯಾಗಿದೆ ಎಂಬ ಕಾರಣಕ್ಕೆ ಈ ಕಾನೂನನ್ನು ಬದಲಿಸಲು ಸಾಧ್ಯವಿಲ್ಲ. ಹೈಕೋರ್ಟ್ ನೀಡಿರುವ ಆದೇಶವು ಬಾಲ್ಯವಿವಾಹವನ್ನು ಉತ್ತೇಜಿಸುವಂತಿದೆ. ಪ್ರೌಢಾವಸ್ಥೆಗೆ ಬಂದಿರುವ ಬಾಲಕಿಯ ಮದುವೆಯನ್ನು ಮುಸ್ಲಿಂ ವೈಯಕ್ತಿಯ ಕಾನೂನು ಮಾನ್ಯ ಮಾಡಿದರೂ ಶಾಸನಬದ್ಧ ಕಾನೂನುಗಳನ್ನು ಹೈಕೋರ್ಟ್ ಕಡೆಗಣಿಸುವಂತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.