ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನು ವೈದ್ಯಕೀಯ ತಪಾಸಣೆ ವೇಳೆ ನಡೆಸುತ್ತಿದ್ದ 'ಎರಡು ಬೆರಳುಗಳ ಪರೀಕ್ಷೆ'ಯನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ. ಇಂತಹ ಪರೀಕ್ಷೆ ನಡೆಸುವವರನ್ನು ದುರ್ನಡತೆಯ ಅಪರಾಧಿ ಎಂದು ಪರಿಗಣಿಸುವುದಾಗಿ ಎಚ್ಚರಿಸಿದೆ.
ಇದೊಂದು ಅವೈಜ್ಞಾನಿಕ ಆಕ್ರಮಣಕಾರಿ ವಿಧಾನ. ಅತ್ಯಾಚಾರ ಸಂತ್ರಸ್ತೆಗೆ ಮರು ಆಘಾತ ಉಂಟು ಮಾಡುತ್ತದೆ. ಹಾಗಾಗಿ ಎರಡು ಬೆರಳುಗಳ ಪರೀಕ್ಷೆಯನ್ನು ಇನ್ಮುಂದೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಪರೀಕ್ಷೆಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಆಘಾತಕ್ಕೆ ಒಳಗಾಗಿ ನರಳುತ್ತಿರುತ್ತಾರೆ. ಇದರಿಂದ ಹೊರ ಬರಲು ತುಂಬಾ ಕಷ್ಟ ಪಡುತ್ತಿರುತ್ತಾರೆ. ಅಂತಹ ಸನ್ನಿವೇಶದಲ್ಲಿ ಎರಡು ಬೆರಳುಗಳ ಪರೀಕ್ಷೆಗೆ ಒಳಪಡಿಸಿದರೆ ಸಂತ್ರಸ್ತರಿಗೆ ಮತ್ತಷ್ಟು ಆಘಾತ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಇನ್ಮುಂದೆ ವೈದ್ಯರು ಅತ್ಯಾಚಾರ ಸಂತ್ರಸ್ತೆಯರನ್ನು ಇಂತಹ ಪರೀಕ್ಷೆಗೆ ಒಳಪಡಿಸಬಾರದು ಎಂದು ತಾಕೀತು ಮಾಡಿದೆ. ಇದನ್ನೂ ಮೀರಿ ಈ ಪರೀಕ್ಷೆ ನಡೆಸುವ ವೈದ್ಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಾಗಿ ಎಚ್ಚರಿಸಿದೆ.
ಜಾರ್ಖಂಡ್ನ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಹೈಕೋರ್ಟ್ ದೋಷಮುಕ್ತಗೊಳಿಸಿತ್ತು. ಈ ಪ್ರಕರಣದ ಮೊದಲ ವಿಚಾರಣೆ ನಡೆಸಿದ್ದ ಕೆಳ ಹಂತದ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಎರಡು ಬೆರಳುಗಳ ಪರೀಕ್ಷೆಯ ವರದಿ ಆಧಾರಿಸಿ ಹೈಕೋರ್ಟ್ ಆರೋಪಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು 'ಎರಡು ಬೆರಳುಗಳ ಪರೀಕ್ಷೆ'ಯ ವಿರುದ್ಧ ಅಸಮಾಧಾನ ಹೊರಹಾಕಿ ಜಾರ್ಖಂಡ್ ಹೈಕೋರ್ಟ್ನ ತೀರ್ಪನ್ನು ರದ್ದು ಮಾಡಿ, ಅತ್ಯಾಚಾರ ಪ್ರಕರಣದ ಆರೋಪಿಯನ್ನ ದೋಷಿ ಎಂದು ತೀರ್ಪು ನೀಡಿತು.
ಇಂದಿಗೂ 'ಎರಡು ಬೆರಳು ಪರೀಕ್ಷೆ' ಪದ್ಧತಿ ಚಾಲ್ತಿಯಲ್ಲಿರುವುದು ಅತ್ಯಂತ ವಿಷಾದನೀಯ. ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯ ಮೇಲೆ ಅತ್ಯಾಚಾರ ನಡೆದಾಗ ಕನ್ಯತ್ವ ಪರೀಕ್ಷೆಯಿಂದ ಯಾವ ವರದಿ ನಿರೀಕ್ಷೆ ಸಾಧ್ಯ? ಆಕೆ ಮೇಲೆ ಅತ್ಯಾಚಾರ ನಡೆದಿದ್ದರೂ ನಂಬಲು ಆಗದಂತೆ ಆಗುತ್ತೆ. ಇಂತಹ ಪರೀಕ್ಷೆಯನ್ನ ನಡೆಸಬಾರದು. ಇದೊಂದು ಅವೈಜ್ಞಾನಿಕ ಪದ್ಧತಿ ಎಂದಿರುವ ನ್ಯಾಯಪೀಠ, ಎರಡು ಬೆರಳುಗಳ ಪರೀಕ್ಷೆ ನಡೆಸದಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ- ಖಾಸಗಿ ಆಸ್ಪತ್ರೆಗಳಿಗೂ ಸುತ್ತೋಲೆ ಹೊರಡಸಲು ನಿರ್ದೇಶನ ನೀಡಿದೆ.