ವಾಷಿಂಗ್ಟನ್: ಉಕ್ರೇನ್‌ನಲ್ಲಿ 1,00,000 ಕ್ಕೂ ಹೆಚ್ಚು ರಷ್ಯಾದ ಮಿಲಿಟರಿ ಸಿಬ್ಬಂದಿ ಹತ್ಯೆಯಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಉಕ್ರೇನ್‌ನ ಪಡೆಗಳು ಕೂಡ ಇದೇ ರೀತಿಯ ಸಾವುನೋವುಗಳ್ನು ಅನುಭವಿಸಿರುವ ಸಾಧ್ಯತೆ ಇದೆ ಎಂದು ಅಮೆರಿಕದ ರಕ್ಷಣಾ ಪಡೆಗಳ ಜಂಟಿ ಸಿಬ್ಬಂದಿ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲಿ ಬುಧವಾರ ತಿಳಿಸಿದ್ದಾರೆ.
'1,00,000 ಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವಿಗೀಡಾಗಿದ್ದಾರೆ ಮತ್ತು ಗಾಯಗೊಂಡಿರುವುದನ್ನು ನೀವು ನೋಡುತ್ತಿದ್ದೀರಿ. ಬಹುಶಃ ಉಕ್ರೇನ್‌ನಲ್ಲಿಯೂ ಇದೇ ರೀತಿ ಸಂಭವಿಸಿರಬಹುದು' ಎಂದು ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌ನಲ್ಲಿ ಹೇಳಿದ್ದಾರೆ.
ಮಿಲ್ಲಿ ಒದಗಿಸಿದ ಅಂಕಿಅಂಶಗಳು ಸರಿಯಿವೆಯೇ ಎಂಬುದರ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. 'ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಮಾತುಕತೆಗೆ ಅವಕಾಶವಿದೆ ಮತ್ತು ಮಿಲಿಟರಿ ಗೆಲುವು ಸಾಧಿಸುವುದು ರಷ್ಯಾ ಅಥವಾ ಉಕ್ರೇನ್‌ಗೆ ಸಾಧ್ಯವಾಗದಿರಬಹುದು ಎಂದು ಮಿಲ್ಲಿ ಹೇಳಿದ್ದಾರೆ.
'ಮಿಲಿಟರಿ ವಿಜಯ ಎನ್ನುವುದು ಬಹುಶಃ ಪದದ ನಿಜವಾದ ಅರ್ಥದಲ್ಲಿ ಮಿಲಿಟರಿ ವಿಧಾನಗಳ ಮೂಲಕ ಬಹುಶಃ ವಿಜಯ ಸಾಧಿಸಲಾಗುವುದಿಲ್ಲ. ಆದ್ದರಿಂದ ನೀವು ಇತರ ಸಾಧ್ಯತೆಗಳತ್ತ ತಿರುಗಬೇಕಾಗಿದೆ ಎಂಬ ಪರಸ್ಪರ ಅರಿವು ಉಭಯ ದೇಶಗಳಿಗೆ ಇರಬೇಕು' ಎಂದು ಮಿಲ್ಲಿ ಹೇಳಿದರು.
ಇಲ್ಲಿ ಸಂಧಾನಕ್ಕೆ ಅವಕಾಶವಿದೆ ಎಂದು ದಕ್ಷಿಣ ಉಕ್ರೇನ್‌ನ ಖೆರ್ಸನ್ ನಗರದಿಂದ ರಷ್ಯಾ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಆದೇಶಿದ ನಂತರ ಮಿಲ್ಲಿ ಅವರ ಈ ಹೇಳಿಕೆಗಳು ಬಂದಿವೆ. ಸೇನೆಯನ್ನು ಹಿಂತೆಗೆದುಕೊಂಡಿರುವುದು ಮಾಸ್ಕೋದ ಮಿಲಿಟರಿ ಕಾರ್ಯಾಚರಣೆಗೆ ದೊಡ್ಡ ಹೊಡೆತವಾಗಿದೆ.
ಇದೇ ವೇಳೆ ಉಕ್ರೇನ್‌ನ ಕೀವ್‌ನಲ್ಲಿರುವ ಅಧಿಕಾರಿಗಳು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ್ದು, ರಷ್ಯಾದ ಸೈನ್ಯವು ಯುದ್ಧವಿಲ್ಲದೆ ಆಯಕಟ್ಟಿನ ನಗರವನ್ನು ಬಿಡುವುದು ಅಸಂಭವನೀಯವಾಗಿದೆ ಎಂದು ಹೇಳಿದರು. ಆದರೆ, ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಸೇನೆಯನ್ನು ಹಿಂತೆಗೆದುಕೊಳ್ಳುವುದು ಮಾಸ್ಕೋ ಯುದ್ಧಭೂಮಿಯಲ್ಲಿ 'ನಿಜವಾದ ಸಮಸ್ಯೆಗಳನ್ನು' ಹೊಂದಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.