ಕುಂಬಳೆ: ಕುಂಬಳೆ ಸಮೀಪದ ಪೆರುವಾಡ್ ಕರಾವಳಿಯ ಮೀನುಗಾರ ಕುಟುಂಬಗಳು ಸೇರಿದಂತೆ ಸುಮಾರು 100 ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ಸಂಚರಿಸಲು ಆಗುತ್ತಿರುವ ಅಡಚಣೆಯ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಮಧ್ಯಪ್ರವೇಶಿಸಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಪೆರುವಾಡ್ ಬಸ್ ನಿಲ್ದಾಣದ ರಸ್ತೆ ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಪಾಲಕರು ಕಿಲೋಮೀಟರ್ ಗೂ ಹೆಚ್ಚು ದೂರ ಇಕ್ಕಟ್ಟಾದ ರಸ್ತೆಯನ್ನು ಅಪಾಯಕಾರಿಯಾಗಿ ದಾಟಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕು ಆಯೋಗಕ್ಕೆ ದೂರು ನೀಡಲಾಗಿತ್ತು. ಬಳಿಕ ಮಕ್ಕಳ ಹಕ್ಕು ಆಯೋಗವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯೋಗದ ಸದಸ್ಯೆ ನ್ಯಾಯವಾದಿ ಶ್ಯಾಮಲಾದೇವಿ ಪೋಷಕರಿಗೆ ತಿಳಿಸಿದ್ದಾರೆ.
ಮೀನುಗಾರರ ಬಹಳಷ್ಟು ಕುಟುಂಬಗಳು ವಾಸಿಸುವ ಪೆರುವಾಡ್ ಕರಾವಳಿಯ ಐವತ್ತು ಕುಟುಂಬಗಳ ನೂರರಷ್ಟು ಮಕ್ಕಳು ಮೊಗ್ರಾಲ್, ಕುಂಬಳೆ ಮತ್ತು ಕಾಸರಗೋಡು ಭಾಗದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಪ್ರತಿದಿನ ಪೆರುವಾಡ್‍ನಿಂದ ಬಸ್‍ನಲ್ಲಿ ತೆರಳುವುದು ವಾಡಿಕೆ. ಹೆದ್ದಾರಿ ತಲುಪಲು ಒಂದೂವರೆ ಕಿಲೋಮೀಟರ್ ನಡೆದು ಅಲ್ಲಿಂದ ಮೊಗ್ರಾಲ್ ಶಾಲೆಗೆ ಬಸ್ ನಲ್ಲಿ ಹೋಗಬೇಕಾಗುತ್ತದೆ. ಈಗ ಹೆದ್ದಾರಿ ಅಭಿವೃದ್ಧಿಯಿಂದಾಗಿ ಬಸ್ ನಿಲ್ದಾಣದ ರಸ್ತೆ ಮುಚ್ಚಲಾಗಿರುವುದು ವ್ಯಾಪಕ ಸಮಸ್ಯೆಗೆ ಕಾರಣವಾಗಿ ದಿಕ್ಕೆಡುವಂತೆ ಮಾಡಿದೆ. ಅಪಾಯಕಾರಿಯಾಗಿರುವ ರಸ್ತೆ ದಾಟಲು ಹೆದರಿ ಅನೇಕರು ಶಾಲೆಗೆ ಹೋಗುವುದನ್ನು ಮೊಟಕುಗೊಳಿಸಿದ್ದಾರೆ ಎನ್ನಲಾಗಿದೆ. ಕರಾವಳಿ ಭಾಗದ ಮಕ್ಕಳ ಶಾಲಾ ಶಿಕ್ಷಣ ಈಮೊದಲೇ ಮಂದಗತಿಯದ್ದೆಂಬುದು ಗಮನಾರ್ಹ. ಹೆದ್ದಾರಿ ಅಭಿವೃದ್ಧಿ ಪೂರ್ಣಗೊಂಡ ನಂತರ, ಸರ್ವಿಸ್ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಬಸ್ ಸಂಚಾರ ಇರುತ್ತದೆ. ಪೆರುವಾಡ್ ರಸ್ತೆ ದಾಟಲು ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಿಸಲಾಗಿಲ್ಲ. ಇದರಿಂದ ಮೊಗ್ರಾಲ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ರಸ್ತೆಯ ಆಬದಿಯ ಶಾಲೆಗೆ ತೆರಳಲು ಈಬದಿಯಿಂದ ಒಂದು ಕಿಲೋಮೀಟರ್ ಮುಂಎ ತೆರಳಿ ಅಲ್ಲಿಂದ ಇನ್ನೊಂದು ಬದಿಯಿಂದ ಮತ್ತೊಂದು ಬಸ್ ನಲ್ಲಿ ಹಿಂತಿರುಗಿ ಬರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ಪುಟಾಣಿ ಮಕ್ಕಳ ಪ್ರಾಥಮಿಕ ಶಿಕ್ಷಣ ಸ್ಥಗಿತಗೊಳ್ಳುವುದು ನಿಶ್ಚಯ ಎನ್ನಲಾಗಿದೆ.
ಸಂಬಂಧಪಟ್ಟವರು ಪೆರುವಾಡ್ ಬಸ್ ನಿಲ್ದಾಣದಲ್ಲಿ ಮಕ್ಕಳು ಸಮಸ್ಯೆಗಳಿಲ್ಲದೆ ಬಸ್ ಸಂಪರ್ಕಿಸಲು ವ್ಯವಸ್ಥೆ ಕಲ್ಪಿಸಬೇಕು ಮತ್ತು ಮೀನುಗಾರರ ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಮತ್ತು ಸಂಚರಿಸಲು ಪೆರುವಾಡ್ ನಲ್ಲಿ ಕೆಳಸೇತುವೆ ಅಥವಾ ಮೇಲ್ಸೇತುವೆಯನ್ನು ನಿರ್ಮಿಸಲು ಅಧಿಕಾರಿಗಳಿಗೆ ಪೋಷಕರು ವಿನಂತಿಸಿದ್ದಾರೆ.
ರಾ.ಹೆದ್ದಾರಿ ಕಾಮಗಾರಿ: ಪೆರುವಾಡ್ ನಲ್ಲಿ ಶಾಲೆ ಬಿಡುವ ತಯಾರಿಯಲ್ಲಿ 100ರಷ್ಟು ವಿದ್ಯಾರ್ಥಿಗಳು!
0
ನವೆಂಬರ್ 16, 2022