ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಿ ಸಂವಿಧಾನಕ್ಕೆ ಮಾಡಲಾದ 103ನೇ ತಿದ್ದುಪಡಿಯು ಸಂವಿಧಾನ ಬದ್ಧ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆಬಿ ಪರ್ದಿವಾಲಾ ಅವರನ್ನು ಒಳಗೊಂಡ ಸಂವಿಧಾನ ಪೀಠ ಈ ತೀರ್ಪು ನೀಡಿತು.
ಐವರು ನ್ಯಾಯಮೂರ್ತಿಗಳ ಪೈಕಿ ಮೂವರು ತಿದ್ದುಪಡಿಯ ಸಿಂಧುತ್ವವನ್ನು ಎತ್ತಿಹಿಡಿದಿದ್ದಾರೆ. ಇಬ್ಬರು ನ್ಯಾಯಮೂರ್ತಿಗಳು ಮಾತ್ರ ಭಿನ್ನಮತದ ತೀರ್ಪು ನೀಡಿದ್ದಾರೆ.
103ನೇ ಸಾಂವಿಧಾನಿಕ ತಿದ್ದುಪಡಿಯನ್ನು ಎತ್ತಿಹಿಡಿದ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ಇದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ, ಜೆ ಬಿ ಪರ್ದಿವಾಲಾ ಅವರು ಇಡಬ್ಲ್ಯೂಎಸ್ ಕೋಟಾವನ್ನು ಎತ್ತಿ ಹಿಡಿದಿದ್ದಾರೆ.
ಅಲ್ಪಸಂಖ್ಯಾತರ ದೃಷ್ಟಿಯಿಂದ ಇಡಬ್ಲ್ಯೂಎಸ್ ಕೋಟಾಕ್ಕೆ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು 2019ರಲ್ಲಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದಿತ್ತು. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿತ್ತು. ಇದು ಸಂವಿಧಾನಬಾಹಿರ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಸುಪ್ರೀಂ ಕೋರ್ಟ್‌ಗೆ ಹಲವರು ಅರ್ಜಿ ಸಲ್ಲಿಸಿದ್ದರು.