ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಿಗೆ ಎರಡು ದಿನದ ಭೇಟಿಗಾಗಿ ಇಂದು ಶುಕ್ರವಾರ ಬರಲಿದ್ದಾರೆ. ಈ ವೇಳೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
'ಮೋದಿ ಅವರು ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಿ, ಸಂತಕವಿ ಕನಕದಾಸ ಮತ್ತು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗಳಿಗೆ ಪುಷ್ಟ ನಮನ ಸಲ್ಲಿಸಲಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಭಾರತ್ ಗೌರವ್ ಕಾಶಿ ದರ್ಶನ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟಿಸಲಿದ್ದಾರೆ' ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
'ಅಲ್ಲದೇ, ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ಅದೇ ದಿನ ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಗಾಂಧಿಗ್ರಾಮ್ ರೂರಲ್ ಇನ್‌ಸ್ಟಿಟ್ಯೂಟ್‌ನ 36ನೇ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಹಲವಾರು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಂತರ ತೆಲಂಗಾಣದ ರಾಮಗುಂಡಂ ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್‌ನ ಘಟಕಕ್ಕೆ ಭೇಟಿ ನೀಡಿ, ಹಲವಾರು ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.