ಮುಂಬೈ: ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಗುರುವಾರ ತಮ್ಮ ಮುಂದಿನ ಚಿತ್ರ 'ದಿ ವ್ಯಾಕ್ಸಿನ್ ವಾರ್' ಎಂದು ಘೋಷಿಸಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಕಮರ್ಷಿಯಲ್ ಯಶಸ್ಸನ್ನು ಗಳಿಸಿದ ನಿರ್ದೇಖರು ಇದೀಗ ತಮ್ಮ ಹೊಸ ಯೋಜನೆಯ ವಿವರಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
'ದಿ ವ್ಯಾಕ್ಸಿನ್ ವಾರ್' ಸಿನಿಮಾವನ್ನು ಪ್ರಸ್ತುತಪಡಿಸಲಾಗುತ್ತಿದೆ. ಭಾರತವು ಹೋರಾಡಿದೆ ಎಂದು ನಿಮಗೆ ತಿಳಿದಿಲ್ಲದ ಹೋರಾಟದ ನಂಬಲಾಗದ ನೈಜ ಕಥೆ. ಮತ್ತು ಅದರ ವಿಜ್ಞಾನ, ಧೈರ್ಯ ಮತ್ತು ಶ್ರೇಷ್ಠ ಭಾರತೀಯ ಮೌಲ್ಯಗಳಿಂದ ಗೆದ್ದಿದೆ' ಎಂದು ಅವರು ಬರೆದಿದ್ದಾರೆ.
ಅಲ್ಲದೆ, ಹಿಂದಿ, ಇಂಗ್ಲಿಷ್, ಗುಜರಾತಿ, ಪಂಜಾಬಿ, ಭೋಜ್‌ಪುರಿ, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಕನ್ನಡ, ಉರ್ದು ಮತ್ತು ಅಸ್ಸಾಮಿ ಎಂಬ 11 ಭಾಷೆಗಳಲ್ಲಿ ಮುಂದಿನ ವರ್ಷ ಆಗಸ್ಟ್ 15 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.
ಈ ಸಿನಿಮಾ 11 ಭಾಷೆಗಳಲ್ಲಿ 2023ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿದೆ. ದಯವಿಟ್ಟು ನಮ್ಮನ್ನು ಆಶೀರ್ವದಿಸಿ. #TheVaccineWar ಎಂದು ಅವರು ಹೇಳಿದ್ದಾರೆ.
ಚಿತ್ರದ ಪೋಸ್ಟರ್ ಅನ್ನು ಸಹ ನಿರ್ದೇಶಕರು ಅನಾವರಣಗೊಳಿಸಿದ್ದಾರೆ. ಈ ಸಿನಿಮಾವನ್ನು ಅಗ್ನಿಹೋತ್ರಿ ಅವರ ಪತ್ನಿ, ನಟಿ ಪಲ್ಲವಿ ಜೋಶಿ ಅವರ ಐ ಆಮ್ ಬುದ್ಧ ಪ್ರೊಡಕ್ಷನ್ಸ್ ಮತ್ತು ಅಭಿಷೇಕ್ ಅಗರ್ವಾಲ್ ಅವರ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಮೂಲಕ ನಿರ್ಮಿಸಲಿದ್ದಾರೆ.
ವ್ಯಾಕ್ಸಿನ್ ವಾರ್ ಚಿತ್ರವು ವೈದ್ಯಕೀಯ ಸಿಬ್ಬಂದಿ ಮತ್ತು ವಿಜ್ಞಾನಿಗಳ ಅಂತ್ಯವಿಲ್ಲದ ಬೆಂಬಲ ಮತ್ತು ಸಮರ್ಪಣೆಗೆ ಸಲ್ಲಿಸುವ ಗೌರವವಾಗಿದೆ. ಈ ಚಿತ್ರವು ನಮ್ಮ ಅತ್ಯುತ್ತಮ ವಿಜ್ಞಾನಿಗಳ ವಿಜಯವನ್ನು ಆಚರಿಸುತ್ತದೆ. ವ್ಯಾಕ್ಸಿನ್ ವಾರ್ ಅವರ ತ್ಯಾಗ, ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ನಮ್ಮ ಗೌರವವಾಗಿದೆ ಎಂದು ಪಲ್ಲವಿ ಜೋಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿರ್ಮಾಪಕರು ಇನ್ನೂ ಸಿನಿಮಾದ ತಾರಾಗಣವನ್ನು ಘೋಷಿಸಿಲ್ಲ. ಆದಾಗ್ಯೂ, ಅನುಭವಿ ನಟ ಅನುಪಮ್ ಖೇರ್ ಅವರು, ಇತ್ತೀಚೆಗೆ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿ ಚಿತ್ರದ ಭಾಗವಾಗಲಿರುವುದಾಗಿ ತಿಳಿಸಿದ್ದರು.