ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರದಂದು ಗಾಳಿಯ ಗುಣಮಟ್ಟ ತೀರಾ ಕಳಪೆ ಮಟ್ಟದಲ್ಲಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.
ಶನಿವಾರ ಬೆಳಿಗ್ಗೆ 9 ಗಂಟೆಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 311ರಷ್ಟಿತ್ತು ಎಂದು ಸಿಪಿಸಿಬಿ ಹೇಳಿದೆ.
ದೆಹಲಿಯಲ್ಲಿ ಕನಿಷ್ಠ ತಾಪಮಾನವು 12.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 29 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ನಿರೀಕ್ಷಿಸಲಾಗಿದೆ.
37 ಮಾನಿಟರ್ ಕೇಂದ್ರಗಳ ಪೈಕಿ 27ರಲ್ಲಿ ಎಕ್ಯೂಐ ಮಟ್ಟ ತೀರಾ ಕಳಪೆ ಮಟ್ಟದಲ್ಲಿತ್ತು. ಜಹಾಂಗೀರ್‌ಪುರಿಯಲ್ಲಿ 351, ನೆಹ್ರೂ ನಗರದಲ್ಲಿ 347, ಅರವಿಂದೊ ಮಾರ್ಗದಲ್ಲಿ 339, ಆರ್.ಕೆ ಪುರಂದಲ್ಲಿ 335 ಮತ್ತು ಬವಾನದಲ್ಲಿ 334 ದಾಖಲಾಗಿದೆ.
ಶೂನ್ಯದಿಂದ ಹಾಗೂ 50ರ ಮಧ್ಯೆ ಎಕ್ಯೂಐ ಮಟ್ಟವನ್ನು 'ಉತ್ತಮ', 51ರಿಂದ 100ರ ವರೆಗೆ 'ತೃಪ್ತಿದಾಯಕ', 101ರಿಂದ 200ರವರೆಗೆ 'ಸಾಧಾರಣ', 201ರಿಂದ 300ರ ವರೆಗೆ 'ಕಳಪೆ', 301ರಿಂದ 400ರ ವರೆಗೆ 'ತೀರಾ ಕಳಪೆ' ಮತ್ತು 401ರಿಂದ 500ರ ವರೆಗೆ 'ವಿಪರೀತ ಕಳಪೆ' ಎಂದು ಪರಿಗಣಿಸಲಾಗುತ್ತದೆ.