ತಿರುವನಂತಪುರ: ಶಬರಿಮಲೆ ಮಂಡಲ- ಮಕರ ಬೆಳಕು ಉತ್ಸವಕ್ಕೆ ಸಂಬಂಧಿಸಿ ಪೋಲೀಸರು ಸಮಗ್ರ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿದ್ದಾರೆ ಎಂದು ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಹೇಳಿದ್ದಾರೆ.
ಶಬರಿಮಲೆ ಯಾತ್ರೆಗೆ ಸಿದ್ಧತೆ ಸಂಬಂಧ ಪಂಪಾ ಮತ್ತು ನಿಲಕ್ಕಲ್‍ಗೆ ಗುರುವಾರ ಭೇಟಿ ನೀಡಿದ ಬಳಿಕ ಪತ್ತನಂತಿಟ್ಟದ ಜಿಲ್ಲಾ ಪೋಲೀಸ್ ಮುಖ್ಯಸ್ಥರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋವಿಡ್ ಬಳಿಕದ ಮುಕ್ತವಾಗಿ ಆಯೋಜನೆಗೊಳ್ಳುತ್ತಿರುವ ಮೊದಲ ಯಾತ್ರೆಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳ ದೃಷ್ಟಿಯಿಂದ 13,000 ಪೋಲೀಸರನ್ನು ನಿಯೋಜಿಸಲಾಗುವುದು. ಪೋಲೀಸರು ಆರು ಹಂತದ ಭದ್ರತಾ ಯೋಜನೆ ರೂಪಿಸಿದ್ದಾರೆ. ಸನ್ನಿಧಿ, ನಿಲಕ್ಕಲ್ ಮತ್ತು ವಡಸೇರಿಕರದಲ್ಲಿ ತಾತ್ಕಾಲಿಕ ಪೋಲೀಸ್ ಠಾಣೆಗಳು ಕಾರ್ಯನಿರ್ವಹಿಸಲಾರಂಭಿಸಿವೆ. ವಿಶೇಷ ಭದ್ರತಾ ವಲಯಗಳಾಗಿ ವಿಂಗಡಿಸಲಾದ 11 ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳಿವೆ. ದೇವರ ವಸ್ತ್ರಗಳ ಮೆರವಣಿಗೆ(ತಂಗಅಂಕಿ ಮೆರವಣಿಗೆ), ತಿರುವಾಭರಣ ಮೆರವಣಿಗೆ ಮತ್ತು ಮಕರ ಬೆಳಕು ಉತ್ಸವಕ್ಕೆ ಹೆಚ್ಚಿನ ಪೋಲೀಸರನ್ನು ನಿಯೋಜಿಸಲಾಗಿದೆ.
ಯಾತ್ರಾರ್ಥಿಗಳ ಸುರಕ್ಷತೆ ಜೊತೆಗೆ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತ ತಡೆಯಲು ಬೈಕ್ ಹಾಗೂ ಮೊಬೈಲ್ ತಂಡಗಳ ಗಸ್ತು ವ್ಯವಸ್ಥೆ ಮಾಡಲಾಗುವುದು. 134 ಸಿಸಿಟಿವಿ ಕ್ಯಾಮೆರಾಗಳು ಸನ್ನಿಧಿ ಮತ್ತು ಪಂಪಾದಲ್ಲಿ 24 ಗಂಟೆಗಳ ಭದ್ರತೆಯನ್ನು ಒದಗಿಸುತ್ತವೆ. ಸಂಚಾರ ದಟ್ಟಣೆಯ ಮೇಲೆ ನಿಗಾ ಇಡಲು ಜಿಲ್ಲೆಯ ಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇರುತ್ತವೆ. ವಿಪತ್ತು ಪರಿಹಾರ ಕಾರ್ಯಾಚರಣೆಗಳ ಭಾಗವಾಗಿ ಎನ್.ಡಿ.ಆರ್.ಎಫ್ ಮತ್ತು ಆರ್.ಎ.ಎಫ್ ತಂಡಗಳನ್ನು ನಿಯೋಜಿಸಲಾಗುವುದು. ಪ್ರಮುಖ ಸ್ಥಳಗಳಲ್ಲಿ ಕೇರಳ ಪೋಲೀಸರ ಕಮಾಂಡೋಗಳನ್ನು ನಿಯೋಜಿಸಲಾಗುವುದು. ನೌಕಾಪಡೆ ಮತ್ತು ವಾಯುಪಡೆಗಳ ಕಣ್ಗಾವಲು ಕೇಳಲಾಗಿದೆ. ಸುಗಮ ಯಾತ್ರೆಗೆ ಡ್ರೋನ್ ಸೇವೆ ಬಳಸಲಾಗುವುದು ಎಂದರು.
ಮುಖ್ಯ ವಾಹನ ನಿಲುಗಡೆಗೆ ಪ್ರದೇಶ ಗುರುತಿಸಲಾಗಿದ್ದು, ಅಕ್ರಮ ಪಾರ್ಕಿಂಗ್ ಗೆ ಅವಕಾಶ ನೀಡುವುದಿಲ್ಲ ಎಂದು ಪೋಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಠಾಣೆಗಳಲ್ಲಿ ವಿಶೇಷ ಪೋಲೀಸ್ ವ್ಯವಸ್ಥೆ ಕಲ್ಪಿಸಲಾಗುವುದು. ಕಡಲತೀರದಲ್ಲಿ ಬ್ಯಾರಿಕೇಡ್, ಲೈಫ್ ಗಾರ್ಡ್ ಮತ್ತಿತರ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.
ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಯಲು ಗುಪ್ತಚರ, ಛಾಯಾ ಪೋಲೀಸರು ಮತ್ತು ಕೆಲವು ವೀಕ್ಷಕರನ್ನು ಸಹ ನಿಯೋಜಿಸಲಾಗಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಯಾತ್ರಿಕರ ಸಂಖ್ಯೆಯ ಬಗ್ಗೆ ಮಾಹಿತಿ ನೀಡುವಂತೆ ಇತರ ರಾಜ್ಯಗಳ ಪೋಲೀಸ್ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಮತ್ತು ಅವರಿಗೆ ತೊಂದರೆ ಕೊಡುವವರನ್ನು ಗುರುತಿಸಲು ಬೇರೆ ರಾಜ್ಯಗಳ ಪೋಲೀಸರನ್ನು ನಿಯೋಜಿಸಲಾಗುವುದು. ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಶಬರಿಮಲೆಗೆ ಭಕ್ತರ ಭೇಟಿಯ ದಿನಗಳಲ್ಲಿ ಪೋಲೀಸ್ ಪಡೆಗಳಿಂದ 24 ಗಂಟೆ ವಿಶೇಷ ಜಾಗರಣೆ ಇರುತ್ತದೆ. ಪತ್ತನಂತಿಟ್ಟ ಕೆಎಸ್‍ಆರ್‍ಟಿಸಿ ಏಡ್ ಪೋಸ್ಟ್‍ನಲ್ಲಿ ಪೋಲೀಸರನ್ನು ನಿಯೋಜಿಸಲಾಗುವುದು. ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಯಾತ್ರಾರ್ಥಿಗಳ ಸಂಖ್ಯೆ ಲಭ್ಯವಿರುವುದರಿಂದ ಜನದಟ್ಟಣೆಯಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಸಾಕಷ್ಟು ಪೋಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಡಿಜಿಪಿ ಹೇಳಿದರು.
ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್, ದಕ್ಷಿಣ ವಲಯ ಐಜಿ ಪಿ. ಪ್ರಕಾಶ್, ತಿರುವನಂತಪುರ ರೇಂಜ್ ಡಿಐಜಿ ಆರ್.ನಿಶಾಂತಿನಿ, ಜಿಲ್ಲಾ ಪೋಲೀಸ್ ಮುಖ್ಯಸ್ಥ ಸ್ವಪ್ನಿಲ್ ಎಂ. ಮಹಾಜನ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಸುರಕ್ಷಿತ ಯಾತ್ರೆಗೆ ಸಿದ್ದತೆ ಪೂರ್ಣ: ಶಬರಿಮಲೆಯಲ್ಲಿ ಆರು ಹಂತದ ಭದ್ರತಾ ಯೋಜನೆ; 13,000 ಪೋಲೀಸರ ನಿಯೋಜನೆ: ಡಿಜಿಪಿ
0
ನವೆಂಬರ್ 10, 2022
Tags