ಕಾಸರಗೋಡು: ಜಿಲ್ಲೆಯ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಒಂದಾಗಿರುವ ನೀಲೇಶ್ವರದ ಹೌಸ್‍ಬೋಟ್ ಕೇಂದ್ರದಲ್ಲಿ ಎಂಟು ಮಂದಿ ಪ್ರವಾಸಿಗಳು ಮತ್ತು ಐವರು ಸಿಬ್ಬಂದಿ ಒಳಗೊಂಡ ಹೌಸ್ಬೋಟ್ ಬುಧವಾರ ಬಿರುಸಿನ ಗಾಳಿ ಮತ್ತು ಮಳೆಗೆ ಸಿಲುಕಿ ಮುಳುಗಡೆಗೊಂಡಿದೆ. ತಕ್ಷಣ ಶಾಮಕ ಮತ್ತು ರಕ್ಷಣಾ ತಂಡಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ಸ್ಥಳಕ್ಕೆ ಭೇಟಿನೀಡಿ ನಡೆಸಿದ ಪರಿಹಾರ ಕಾರ್ಯದಿಂದ ಜೀವಾಪಾಯದಿಂದ ಎಲ್ಲರನ್ನು ಪಾರುಮಾಡಲಾಗಿದೆ. ಎನ್‍ಡಿಆರ್‍ಎಫ್ ಯೋಧರ ವಾಹನಗಳು, ಅಗ್ನಿಶಾಮಕ ದಳ, ಆಂಬುಲೆನ್ಸ್‍ನ ಆರ್ಭಟದ ಸಂಚಾರದಿಂದ ಪರಿಸರದ ನಿವಾಸಿಗಳು ಬೆಚ್ಚಿ ಬಿದ್ದಿದ್ದು, ಭಾರಿ ಸಂಕ್ಯೆಯಲ್ಲಿ ಜನರು ಒಟ್ಟುಸೇರಿದ್ದಾರೆ. ನಂತರ ಇದು ಜಿಲ್ಲಾಡಳಿತ ನಡೆಸಿದ ಕಲ್ಪಿತ ಪ್ರದರ್ಶನವೆಂದು ಅರಿತ ಜನತೆ ನಿಟ್ಟುಸಿರು ಬಿಟ್ಟರು.
ನೀಲೇಶ್ವರದ ತೇಜಸ್ವಿನಿ ಹೊಳೆಯ ಕೋಟ್ಟಪರಪುರ-ಅಚ್ಚಾಮತುರ್ತಿ ಸೇತುವೆ ಸನಿಹ ಕಲ್ಪಿತ ಪ್ರದರ್ಶನ ಆಯೋಜಿಸಲಾಗಿತ್ತು. ನಿಯಂತ್ರಣ ಕಳೆದುಕೊಂಡ ಹೌಸ್‍ಬೋಟ್‍ನ ಯಂತ್ರ ಕೆಟ್ಟಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣಕೊಠಡಿಗೆ ಸಂದೇಶ ರವಾನೆಯಾಗಿದ್ದು, ಅಲ್ಲಿಂದ ತಾಲೂಕು ನಿಯಂತ್ರಣ ಕೊಠಡಿಗೆ ಸಂದೇಶ ಮರು ರವಾನೆಯಾಗುತ್ತಿದ್ದಂತೆ ಅಗ್ನಿಶಾಮಕದಳ, ಪೊಲೀಸ್, ಆಂಬುಲೆನ್ಸ್, ರಾಷ್ಟ್ರೀಯ ವಿಪತ್ತು ನಿವಾರಣಾ ತಂಡ ಸ್ಥಳಕ್ಕೆ ತಲುಪಿತ್ತು. ಘಟನಾ ಕಮಾಂಡರ್ ಆಗಿರುವ ತಹಸೀಲ್ದಾರ್ ಆಗಮಿಸಿ ವಿವಿಧ ಇಲಾಖೆಗಳನ್ನು ಸಮನ್ವಯಗೊಳಿಸಿ ಅಗತ್ಯ ಸೂಚನೆ ನೀಡಿದರು. ತ್ರಿಕರಿಪುರ ಮತ್ತು ಕಾಞಂಗಾಡಿ ಠಾಣೆಗಳ ಠಾಣಾಧಿಕಾರಿ ನೇತೃತ್ವದ 15 ಮಂದಿಯ ಅಗ್ನಿಶಾಮಕ ಮತ್ತು ರಕ್ಷಣಾ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ತಹಸೀಲ್ದಾರ್ ಅವರ ಮನವಿಯಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಎನ್‍ಡಿಆರ್‍ಎಫ್‍ನ ಸೇವೆಯನ್ನು ಜಿಲ್ಲೆಯಲ್ಲಿ ನಿಯೋಜಿಸುವ ಮೂಲಕ ಕಾರ್ಯಾಚರಣೆ ಸುಗಮಗೊಳಿಸಲಾಯಿತು. ದೋಣಿಯಲ್ಲಿದ್ದ ಎಂಟು ಪ್ರಯಾಣಿಕರಲ್ಲಿ ನಾಲ್ವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಪಡೆಗಳು ರಕ್ಷಿಸಿದರೆ, ಉಳಿದ ನಾಲ್ವರನ್ನು ಎನ್‍ಡಿಆರ್‍ಎಫ್ ರಕ್ಷಿಸಿದೆ. ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ನೀಡಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಂಬ್ಯುಲೆನ್ಸ್ ಮೂಲಕ ನೀಲೇಶ್ವರ ತಾಲೂಕು ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಐವರು ಸಿಬ್ಬಂದಿಯನ್ನು ರಕ್ಷಿಸಿ ಮೇಲಕ್ಕೆತ್ತಲಾಯಿತು.
ಬೋಟಿಂಗ್ ಅಪಘಾತದ ಸಂದರ್ಭ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಎರಡು ಗಂಟೆಗಳ ಕಲ್ಪಿತ ಪ್ರದರ್ಶನ ಮೂಲಕ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು. ಅಪರ ಜಿಲ್ಲಾಧಿಕಾರಿ ಸುಫ್ಯಾನ್ ಅಹ್ಮದಿ, ಸಹಾಯಕ ಜಿಲ್ಲಾಧಿಕಾರಿ ಡಾ.ಮಿಥುನ್ ಪ್ರೇಮರಾಜ್, ನೀಲೇಶ್ವರಂ ನಗರಸಭೆ ಅಧ್ಯಕ್ಷ ಟಿ.ವಿ. ಶಾಂತಾ, ಎಡಿಎಂ ಎ.ಕೆ. ರಮೇಂದ್ರನ್, ಡಿವೈಎಸ್ಪಿ ಪಿ. ಬಾಲಕೃಷ್ಣನ್ ನಾಯರ್, ಎನ್‍ಡಿಆರ್‍ಎಫ್ ಸಹಾಯಕ ಕಮಾಂಡೆಂಟ್ ಪ್ರವೀಣ್ ಎಸ್ ಪ್ರಸಾದಿ, ಎನ್‍ಡಿಆರ್‍ಎಫ್ ಇನ್ಸ್‍ಪೆಕ್ಟರ್ ಪ್ರಶಾಂತ್ ಜಿ ಚಿನಾಟಿ, ಹೊಜದುರ್ಗ ತಹಸೀಲ್ದಾರ್ ಎನ್. ಮಣಿರಾಜ್ ಮುಂತಾದವರು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಹೌಸ್‍ಬೋಟ್ ಮಾಲೀಕರು, ಸಿಬ್ಬಂದಿ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಗೆ ನೀರಿನ ಸುರಕ್ಷತೆ ಮತ್ತು ಅಗ್ನಿಶಾಮಕ ಕುರಿತು ಜಾಗೃತಿ ತರಗತಿಯನ್ನು ನಡೆಸಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನಿರೀಕ್ಷಕ ಪ್ರಶಾಂತ್ ಜಿ. ಚಿನಾತಿ, ಕಾಞಂಗಾಡ್ ಠಾಣಾಧಿಕಾರಿ ಪಿ.ವಿ.ಪವಿತ್ರನ್ ಮತ್ತಿತರರು ತರಗತಿಗಳನ್ನು ನಡೆಸಿಕೊಟ್ಟರು.