ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾದ ಶಿವಲಿಂಗದ ಪೂಜೆಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ವಾರಾಣಸಿಯ ತ್ವರಿತ ನ್ಯಾಯಾಲಯವು ಮುಂದೂಡಿದೆ.
ನ. 8ಕ್ಕೆ ತೀರ್ಪು ಪ್ರಕಟ ಮಾಡುವುದಾಗಿ ಕೋರ್ಟ್ ಈ ಮೊದಲು ಹೇಳಿತ್ತು.
ಸದ್ಯ ತೀರ್ಪನ್ನು ಮುಂದೂಡಲಾಗಿದ್ದು, ನ. 14ಕ್ಕೆ ಪ್ರಕಟಿಸುವುದಾಗಿ ತಿಳಿಸಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 27ರಂದು ಪೂರ್ಣಗೊಳಿಸಿದ್ದ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮಹೇಂದ್ರ ಪಾಂಡೆ ಅವರು ತೀರ್ಪನ್ನು ಕಾಯ್ದಿರಿಸಿದ್ದರು.
ಜ್ಞಾನವಾಪಿ ಸಂಕೀರ್ಣಕ್ಕೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಬೇಕು. ಸಂಕೀರ್ಣವನ್ನು ಸನಾತನ ಸಂಘಕ್ಕೆ ಹಸ್ತಾಂತರಿಸಬೇಕು. ಅಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಮೇ 24 ರಂದು 'ವಿಶ್ವ ವೈದಿಕ ಸನಾತನ ಸಂಘದ' ಪ್ರಧಾನ ಕಾರ್ಯದರ್ಶಿ ಫಿರ್ಯಾದಿ ಕಿರಣ್ ಸಿಂಗ್ ಅವರು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು ಮೇ 25 ರಂದು ಮೊಕದ್ದಮೆಯನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದ್ದರು.