ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ತನ್ನ ಆಸ್ತಿ ವಿವರ ಘೋಷಿಸಿದ್ದು, ₹15 ಸಾವಿರ ಕೋಟಿ ನಗದು, 10.3 ಟನ್ ಚಿನ್ನ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಮಾರು ₹ 5,300 ಕೋಟಿ ಠೇವಣಿ ಹೊಂದಿದೆ.
ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಟಿಟಿಡಿ ಅಧಿಕಾರಿ ಎವಿ ಧರ್ಮ ರೆಡ್ಡಿ, ದೇವಾಲಯದ ಒಟ್ಟು ಆಸ್ತಿ ₹2.26 ಲಕ್ಷ ಕೋಟಿ ತಲುಪಿರುವುದಾಗಿ ಹೇಳಿದ್ದಾರೆ.
2019ರಿಂದ ವಿವಿಧ ರೂಪಗಳಲ್ಲಿ ಟಿಟಿಡಿ ಹೂಡಿಕೆ ₹15,938 ಕೋಟಿ. ಕಳೆದ ಮೂರು ವರ್ಷಗಳಲ್ಲಿ ಹೂಡಿಕೆ ₹2,900 ಕೋಟಿ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಂಕ್‌ಗಳಲ್ಲಿ ಚಿನ್ನದ ಠೇವಣಿ 2.9 ಟನ್ ಹೆಚ್ಚಾಗಿದ್ದು, 2019ರಲ್ಲಿ 7.3 ಟನ್ ಇತ್ತು. ಹೆಚ್ಚುವರಿ ಆದಾಯವನ್ನು ಆಂಧ್ರಪ್ರದೇಶ ಸರ್ಕಾರದ ಭದ್ರತಾ ಠೇವಣಿಗಳಲ್ಲಿ ಹೂಡಿಕೆ ಮಾಡಲಿರುವ ವರದಿಯನ್ನು ಟಿಟಿಡಿ ನಿರಾಕರಿಸಿದೆ.
'2019ರಿಂದ ಹೂಡಿಕೆ ಮಾರ್ಗಸೂಚಿ ಬಲಗೊಂಡಿದೆ. ದೇವಾಲಯದ ಭಕ್ತರು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಟಿಟಿಡಿಯ ಎಲ್ಲ ಹೂಡಿಕೆಗಳು ಪಾರದರ್ಶಕವಾಗಿರುತ್ತವೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
7,123 ಎಕರೆ ಆಸ್ತಿಯನ್ನು ಅಥವಾ 960 ಸ್ವತ್ತುಗಳನ್ನು ದೇವಾಲಯ ಹೊಂದಿದೆ. ಪ್ರತಿನಿತ್ಯ 50 ಸಾವಿರದಿಂದ 1 ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ನ.5 ರಂದು 82 ಸಾವಿರ ಭಕ್ತರು ಭೇಟಿ ನೀಡಿದ್ದಾರೆ. ಉದ್ಯಮಿಗಳು, ಸಿನಿಮಾ ತಾರೆಯರು, ಜನಪ್ರಿಯ ವ್ಯಕ್ತಿಗಳು, ರಾಜಕಾರಣಿಗಳು ಹೆಚ್ಚಾಗಿ ತಿರುಪತಿಯಲ್ಲಿ ದೊಡ್ಡ ಮೊತ್ತದ ಸೇವೆ ಸಲ್ಲಿಸುತ್ತಾರೆ.