ಒಹಿಯೊ: ಮುಂದಿನ ವಾರ ನವೆಂಬರ್ 15ರಂದು ಬಹುದೊಡ್ಡ ಘೋಷಣೆಯನ್ನು ಮಾಡಲಿದ್ದೇನೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದು ಕುತೂಹಲ ಮೂಡಿಸಿದ್ದಾರೆ.
2024ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಅವರ ಘೋಷಣೆಯಿರುತ್ತದೆಯೇ ಎಂಬ ಕುತೂಹಲ ಮನೆಮಾಡಿದೆ.
ನಾನು ನವೆಂಬರ್ 15ರಂದು ಮಂಗಳವಾರ ಬಹುದೊಡ್ಡ ಘೋಷಣೆಯನ್ನು ಫ್ಲೋರಿಡಾದ ಪಾಲ್ಮ್ ಬೀಚ್ ನ ಮರ್ ಎ ಲಾಗೊದಲ್ಲಿ ಮಾಡಲಿದ್ದೇನೆ ಎಂದು ನಿನ್ನೆ ಒಹಿಯೊದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಜನರ ಮುಂದೆ ಹೇಳಿದರು.
ತಾವು ಮುಂದಿನ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಈ ನಿಟ್ಟಿನಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ಯೋಜನೆಯನ್ನು, ತೀವ್ರ ಪ್ರಚಾರ ಕೈಗೊಳ್ಳುವ ಯೋಜನೆಯನ್ನು ಇತ್ತೀಚೆಗೆ ಅಮೆರಿಕ ಸಂಸತ್ತಿನ ಮಧ್ಯಂತರ ಅವಧಿಯ ಚುನಾವಣೆಗೆ ಮುನ್ನ ಪ್ರಚಾರದಲ್ಲಿ ಒಹಿಯೊದಲ್ಲಿ ಹೇಳಿದ್ದರು. ಅವರು ಸೆನೆಟ್ ಅಭ್ಯರ್ಥಿ ಜೆಡಿ ವಾನ್ಸೆ ಪರ ಮಧ್ಯಂತರ ಅವಧಿಯ ಚುನಾವಣೆಗೆ ಪ್ರಚಾರ ನಡೆಸುವ ವೇಳೆ ಹೀಗೆ ಹೇಳಿದ್ದಾರೆ.
ದೇಶವನ್ನು ಅಭಿವೃದ್ಧಿ, ಯಶಸ್ಸಿನೆಡೆಗೆ ವೈಭವೀಕರಿಸಲು ನಾನು ಸಕ್ರಿಯನಾಗಿ ಮತ್ತಷ್ಟು ಪ್ರಚಾರ ನಡೆಸಬೇಕು. ಅದು ಸದ್ಯದಲ್ಲಿಯೇ ಆಗಲಿದೆ ಎಂದು ಭಾವಿಸುತ್ತೇನೆ ಎಂದು ಸೇರಿದ್ದ ಜನಸಮೂಹವನ್ನು ಉದ್ದೇಶಿಸಿ ಹೇಳಿದಾಗ ಟ್ರಂಪ್..ಟ್ರಂಪ್..ಟ್ರಂಪ್ ಎಂದು ಜನರು ಕೂಗಿದರು.
ಅಮೆರಿಕ ಸಂಸತ್ತಿನ ಕೆಳಮನೆ ‘ಜನಪ್ರತಿನಿಧಿ ಸಭೆ’ಗೆ (House of representatives) ನಡೆಯುತ್ತಿರುವ ಮಧ್ಯಂತರ ಚುನಾವಣೆಯಲ್ಲಿ ಕರ್ನಾಟಕದ ಬೆಳಗಾವಿ ಮೂಲದ ಉದ್ಯಮಿ ಥಾಣೇದಾರ್ ಸೇರಿದಂತೆ ಐವರು ಭಾರತೀಯರು ಸ್ಪರ್ಧಿಸುತ್ತಿದ್ದಾರೆ.
ಬೆಳಗಾವಿ ಮೂಲದವ ಥಾಣೆದಾರ್ ಅವರು ಮೂಲತಃ ಉದ್ಯಮಿಯಾಗಿದ್ದು, ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಧ್ಯಂತರ ಚುನಾವಣೆಯಲ್ಲಿ ಇವರು ಕ್ಯಾಲಿಫೋರ್ನಿಯಾದ 7ನೇ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ. ಇವರಲ್ಲದೇ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಮತ್ತು ಪ್ರಮಿಳಾ ಜೈಪಾಲ್ ಸಹ ವಿವಿಧ ಕ್ಷೇತ್ರಗಳಿಂದ ಚುನಾವಣಾ ರೇಸ್‌ನಲ್ಲಿದ್ದಾರೆ. ಇವರಲ್ಲಿ ಬೇರಾ ಅತ್ಯಂತ ಹಿರಿಯರಾಗಿದ್ದು, ಈವರೆಗೆ 6 ಬಾರಿ ಗೆಲುವು ಸಾಧಿಸಿದ್ದಾರೆ.
ಮಧ್ಯಂತರ ಚುನಾವಣೆಗೆ ಮಾಜಿ ಅಧ್ಯಕ್ಷರುಗಳಾದ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್, ಮಾಜಿ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಸತತವಾಗಿ ಪ್ರಚಾರದಲ್ಲಿ ತೊಡಗಿದ್ದರೆ ಅಧ್ಯಕ್ಷ ಜೋ ಬೈಡನ್ ಮಾತ್ರ ಅಷ್ಟೊಂದು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಸೀಮಿತ ಪ್ರಮಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.