ನವದೆಹಲಿ: ಕಳೆದ ಅಕ್ಟೋಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 16.5 ರಷ್ಟು ಏರಿಕೆಯಾಗಿದ್ದು, ಜಿಎಸ್ ಟಿ ಕಲೆಕ್ಷನ್ ದಾಖಲೆಯ 1.52 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಮತ್ತು ಇದು ಇದುವರೆಗಿನ ಎರಡನೇ ಅತಿ ಹೆಚ್ಚು ಸಂಗ್ರಹವಾಗಿದೆ.
ಹಬ್ಬದ ದಿನಗಳು ತೆರಿಗೆ ಸಂಗ್ರಹ ಹೆಚ್ಚಳ ಪ್ರವೃತ್ತಿ ಮುಂದುವರಿಯಲು ಸಹಾಯ ಮಾಡಿದ್ದು, ಅಕ್ಟೋಬರ್‌ನಲ್ಲಿ 1,51,718 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ 26,039 ಕೋಟಿ ರೂ. ಹಾಗೂ ರಾಜ್ಯ ಜಿಎಸ್‌ಟಿ 33,396 ಕೋಟಿ ರೂ. ಸಂಗ್ರಹವಾಗಿದೆ.
ಅಕ್ಟೋಬರ್ 2022 ರಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್‌ಟಿ ಆದಾಯ ಕಳೆದ ವರ್ಷದ ಅಕ್ಟೋಬರ್ ಗಿಂತ ಶೇ. 16.6 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ ತಿಳಿಸಿದೆ.
ಈ ಹಿಂದೆ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಅದು ಬಿಟ್ಟರೆ ಈಗ ಅಕ್ಟೋಬರ್‌ನಲ್ಲಿ ಆಗಿರುವ 1.51 ಲಕ್ಷ ಕೋಟಿ ರೂ. ಸಂಗ್ರಹ ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.