ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ದಿನಗೂಲಿ ಕಾರ್ಮಿಕ ಮಹೇಂದ್ರ ಪಾಟನಿ ಎಂಬುವರು ಸ್ಪರ್ಧಿಸಿದ್ದು, ₹1 ಮುಖ ಬೆಲೆಯ 10,000 ನಾಣ್ಯಗಳನ್ನು ಠೇವಣಿಯಾಗಿ ನೀಡಿದ್ದಾರೆ. ಪಾಟನಿ ಅವರು ಗಾಂಧಿನಗರ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಕಳೆದ ವಾರ ನಾಮಪತ್ರ ಸಲ್ಲಿಸಿದ್ದಾರೆ.
2019ರಲ್ಲಿ ರಾಜಧಾನಿ ಗಾಂಧಿನಗರದಲ್ಲಿ ಹೋಟೆಲ್ ನಿರ್ಮಿಸಲು ಪಾಟನಿ ಅವರು ವಾಸಿಸುತ್ತಿದ್ದ ಕೊಳೆಗೇರಿ ಕಾಲೊನಿಯನ್ನು ಸರ್ಕಾರ ತೆರವುಗೊಳಿಸಿತ್ತು.
ಮೂರು ವರ್ಷಗಳ ಹಿಂದೆ ನೆಲೆ ಕಳೆದುಕೊಂಡ 521 ಗುಡಿಸಲು ವಾಸಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಪ್ರತಿನಿಧಿಯಾಗಿ ಪಾಟನಿ ಅವರನ್ನು ಆಯ್ಕೆ ಮಾಡಿದ್ದಾರೆ.
ಪಾಟನಿ ಅವರು ವಾಸಿಸುತ್ತಿದ್ದ ಕೊಳೆಗೇರಿಯನ್ನು ಸರ್ಕಾರ ಎರಡು ಬಾರಿ ತೆರವು ಮಾಡಿದೆ. 2010ರಲ್ಲಿ ದಂಡಿ ಕುಟೀರ ವಸ್ತುಸಂಗ್ರಹಾಲಯ ನಿರ್ಮಿಸಲು ತೆರವು ಮಾಡಲಾಗಿತ್ತು. 2019ರಲ್ಲಿ ಹೋಟೆಲ್ ನಿರ್ಮಿಸುವ ಉದ್ದೇಶದಿಂದ ಮತ್ತೊಂದು ಸ್ಥಳಕ್ಕೆ ಕೊಳೆಗೇರಿ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.
'ನಮ್ಮ ಕೊಳೆಗೇರಿಯನ್ನು ತೆರವು ಮಾಡಿದ್ದರಿಂದ ದಿನಗೂಲಿ ಕೆಲಸ ಮಾಡುತ್ತಿದ್ದ ಬಹುತೇಕರು ನಿರುದ್ಯೋಗಿ ಗಳಾದರು. ಹತ್ತಿರದ ಸ್ಥಳಕ್ಕೆ ನಮ್ಮನ್ನು ಸ್ಥಳಾಂತರಿಸಿದರೂ, ಅಲ್ಲಿ ಸೂಕ್ತ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಇಲ್ಲ. ಸರ್ಕಾರದ ನಿರಾಸಕ್ತಿಯಿಂದ ನೊಂದು, ಚುನಾವಣಾ ಠೇವಣಿ ಹಣವಾಗಿ 10,000 ರೂಪಾಯಿಯನ್ನು ದಿನಗೂಲಿ ಕಾರ್ಮಿಕರು ಒಟ್ಟುಗೂಡಿಸಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡಿರಿಸಿದ್ದಿದ್ದರೆ, ನಾನು ಚುನಾವಣೆಗೆ ಸ್ಪರ್ಧಿಸುವ ಪ್ರಮೇಯ ಬರುತ್ತಿರಲಿಲ್ಲ' ಎಂದು ಪಾಟನಿ ವಿವರಿಸಿದ್ದಾರೆ.