ಹೈದರಾಬಾದ್: 'ವಿಕ್ರಂ-ಎಸ್' ರಾಕೆಟ್ ಅಭಿವೃದ್ಧಿಪಡಿಸಿ ಅದನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಹೈದರಾಬಾದ್ ಮೂಲದ ಬಾಹ್ಯಾಕಾಶ ನವೋದ್ಯಮ ಸಂಸ್ಥೆ 'ಸ್ಕೈರೂಟ್ ಏರೋಸ್ಪೇಸ್' ಇನ್ನೊಂದು ವರ್ಷದಲ್ಲಿ ಮತ್ತೊಂದು ರಾಕೆಟ್ ಉಡಾವಣೆ ಮಾಡಲು ಸಿದ್ಧತೆ ಆರಂಭಿಸಿದೆ.
'ವಿಕ್ರಂ-1' ಹೆಸರಿನ ರಾಕೆಟ್ ಅನ್ನು ಇನ್ನು ಒಂದು ವರ್ಷದೊಳಗೆ ಉಡಾವಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿರುವ ಅತಿ ದೊಡ್ಡ ಗಾತ್ರದ ರಾಕೆಟ್ ಇದಾಗಿದೆ' ಎಂದು ಸ್ಕೈರೂಟ್ ಏರೋಸ್ಪೇಸ್‌ನ ಸಹ ಸಂಸ್ಥಾಪಕ ಪವನ್ ಚಂದನ ಹೇಳಿದ್ದಾರೆ.
'ಅಂತರಿಕ್ಷ ಯಾನಕ್ಕೆ ತಗಲುವ ವೆಚ್ಚವನ್ನು ಮುಂದಿನ ದಿನಗಳಲ್ಲಿ ಕಡಿತಗೊಳಿಸುವ ಗುರಿಯನ್ನೂ ನಾವು ಹೊಂದಿದ್ದೇವೆ. ರಾಕೆಟ್ ಅಭಿವೃದ್ಧಿ ಹಾಗೂ ಉಡಾವಣೆ ಕಾರ್ಯಕ್ಕಾಗಿ ಈವರೆಗೆ ನಮ್ಮ ಸಂಸ್ಥೆಯು ಸುಮಾರು ₹550.52 ಕೋಟಿ ಮೊತ್ತ ಸಂಗ್ರಹಿಸಿದೆ. ಈಗ ತಾನೆ ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಟ್ಟಿರುವ ಸಂಸ್ಥೆಯು ಇಷ್ಟು ದೊಡ್ಡ ಮೊತ್ತ ಕಲೆಹಾಕಿರುವುದು ನಿಜಕ್ಕೂ ಸವಾಲಿನ ಕೆಲಸ' ಎಂದಿದ್ದಾರೆ.
ವಿಕ್ರಂ-ಎಸ್, ಖಾಸಗಿಯಾಗಿ ಅಭಿವೃದ್ಧಿಪಡಿಸಲಾಗಿರುವ ದೇಶದ ಮೊದಲ ರಾಕೆಟ್ ಎನಿಸಿದೆ.