ನಾಗರಕೊಯಿಲ್: ಕೇರಳದ ನಿದ್ರಾವಿಲಾದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಸಾವು ಭಾರಿ ಚರ್ಚೆಗೀಡಾಗಿದ್ದು, ಆಕೆಯ ಸಂಬಂಧಿಕರು ಕೊಲೆ ಎಂದು ಆರೋಪ ಮಾಡಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಅಭಿತಾ (19) ಎಂದು ಗುರುತಿಸಲಾಗಿದೆ. ಈಕೆ ವವರಾ ಮೂಲದ ಚಿನ್ನಪ್ಪರ್ ಮತ್ತು ಥಾಂಕಬೈ ದಂಪತಿಯ ಪುತ್ರಿ.
ಪೊಲೀಸರ ಪ್ರಕಾರ ಮೃತ ಅಭಿತಾ, ಕಲಿಯಕ್ಕವಿಲೈನಲ್ಲಿರುವ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿಯಾಗಿದ್ದಳು. ಕಳೆದ ಎರಡು ವರ್ಷಗಳಿಂದ ಯುವಕನೊಬ್ಬನನ್ನು ಲವ್ ಮಾಡುತ್ತಿದ್ದಳು. ಮದುವೆ ನೆಪದಲ್ಲಿ ಇಬ್ಬರು ತಮ್ಮ ಸಂಬಂಧ ಮುಂದುವರಿಸಿದ್ದರು. ಈ ವಿಚಾರವನ್ನು ಸ್ವತಃ ಅಭಿತಾ ತನ್ನ ಪಾಲಕರಿಗೆ ಹೇಳಿಕೊಂಡಿದ್ದಳು. ಆದರೆ, ಅವರ ಕುಟುಂಬಕ್ಕೆ ಇದು ಇಷ್ಟವಿರಲಿಲ್ಲ.
ಸೆ.7ರಂದು ಏಕಾಂಗಿಯಾಗಿ ಭೇಟಿಯಾಗುವಂತೆ ಯುವಕ ಕೇಳಿದ ನಂತರ ಇಬ್ಬರು ಭೇಟಿಯಾದರು. ಈ ವೇಳೆ ಅಭಿತಾ, ಯುವಕ ನೀಡಿದ ಜ್ಯೂಸ್ ಕುಡಿದಿದ್ದಳು. ಮರುದಿನದಿಂದ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು ಎಂದು ಆಕೆಯ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಆಕೆಯನ್ನು ಮಾರ್ತಾಂಡಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಆಕೆಗೆ ಸ್ಲೋ ಪಾಯ್ಸನ್ ಲಿಕ್ವಿಡ್ ನೀಡಿರುವುದರಿಂದ ಮೃತಪಟ್ಟಿದ್ದಾಳೆಂದು ಆಕೆಯ ತಾಯಿ ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಅಭಿತಾಳ ಲಿವರ್ ಸಂಪೂರ್ಣ ಹಾಳಾಗಿದೆ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಮುಂದಿನ ತನಿಖೆ ನಡೆಸಬಹುದು ಎಂದು ಪೊಲೀಸರು ಹೇಳಿದ್ದಾರೆ.
ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ನಿನ್ನೆ ಆಕೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಆಕೆಯ ತಾಯಿಯ ದೂರಿನ ಮೇರೆಗೆ ತಮಿಳುನಾಡು ನಿದ್ರಾವಿಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.