ನವೆದೆಹಲಿ: 2015ರಿಂದ 2022ರ ವರೆಗಿನ 8 ವರ್ಷಗಳು ವಾತಾವರಣದಲ್ಲಿ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾದ ವರ್ಷಗಳು. 2022ರ ಸರಾಸರಿ ಉಷ್ಣಾಂಶವು ಕೈಗಾರಿಕಾ ಪೂರ್ವ(1985-1900) ಕಾಲದ ಸರಾಸರಿಗಿಂತ 1.15 ಡಿಗ್ರಿ ಸೆಲ್ಸಿಯಸ್ ಹೆಚ್ಚು ಎಂದು ವರ್ಲ್ಡ್ ಮೆಟೆಯೊರೊಲಾಜಿಕಲ್ ಆರ್ಗನೈಸೇಷನ್(ಡಬ್ಲುಎಮ್‌ಒ) ಭಾನುವಾರ ತಿಳಿಸಿದೆ.
ಯುಎನ್‌ಎಫ್‌ಸಿಸಿಸಿಯ ಸದಸ್ಯ ರಾಷ್ಟ್ರಗಳ 27ನೇ ಶೃಂಗಸಭೆಯಲ್ಲಿ 'ಡಬ್ಲುಎಮ್‌ಒ ಜಾಗತಿಕ ವಾತಾವರಣ-2022ರ ತಾತ್ಕಾಲಿಕ ಸ್ಥಿತಿಗತಿ' ಎಂಬ ವರದಿಯನ್ನು ನೀಡಲಾಯಿತು. 1993ರಿಂದ ಇಲ್ಲಿಯವರೆಗೆ ಸಮುದ್ರಮಟ್ಟದ ಏರಿಕೆ ದರವು ದುಪ್ಪಟ್ಟು ಆಗಿದೆ. 2020ರ ಜನವರಿಯಿಂದ ಇಲ್ಲಿಯವರೆಗೆ ಸಮುದ್ರಮಟ್ಟವು 10 ಮಿಮೀ ಏರಿಕೆ ಕಂಡಿದೆ. ಕಳೆದ 30 ವರ್ಷಗಳಿಂದ ಸಮುದ್ರಮಟ್ಟದ ಮಾಪನವನ್ನು ಉಪಗ್ರಹ ಮೂಲಕ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಜಾಗತಿಕವಾಗಿ ಸಮುದ್ರಮಟ್ಟವು ಇಷ್ಟು ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿರುವುದು' ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸದ್ಯದ ಪರಿಸ್ಥಿತಿಯೇ ಮುಂದುವರೆದರೆ 1850ರಿಂದ ಇಲ್ಲಿಯವರೆಗೆಗಿನ ಅತಿ ಹೆಚ್ಚು ಉಷ್ಣಾಂಶ ದಾಖಲಾದ ವರ್ಷಗಳಲ್ಲಿ 2022ನೇ ಇಸವಿಯು ಐದು ಅಥವಾ ಆರನೇ ಸ್ಥಾನ ಪಡೆಯಲಿದೆ ಮತ್ತು 2021ಕ್ಕಿಂತ ಅತಿ ಹೆಚ್ಚು ಉಷ್ಣಾಂಶ ದಾಖಲಾದ ವರ್ಷ ಎಂದು ಕರೆಸಿಕೊಳ್ಳುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮುಂಗಾರು ಪೂರ್ವ ಅವಧಿಯು ಭಾರತ ಮತ್ತು ಪಾಕಿಸ್ತಾನದಲ್ಲಿ ಅತಿಹೆಚ್ಚು ಉಷ್ಣಾಂಶದಿಂದ ಕೂಡಿತ್ತು. ಇದರಿಂದಾಗಿ ಬೆಳೆ ಹಾನಿ ಕೂಡಾ ಆಗಿದೆ. ಇದರ ಜೊತೆ, ಭಾರತದಲ್ಲಿ ಗೋಧಿ ಮತ್ತು ಅಕ್ಕಿ ಆಮದನ್ನು ನಿರ್ಬಂಧಿಸಿರುವುದು ಅಂತರರಾಷ್ಟ್ರೀಯ ಆಹಾರ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.