ಬೆಂಗಳೂರು: ಹಣದುಬ್ಬರ ತಗ್ಗಿದೆ ಎಂದು ಎಂದು ಹೇಳಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್, 2047ರಲ್ಲಿ ಭಾರತ ಜಗತ್ತಿನ ಟಾಪ್-3 ರಾಷ್ಟ್ರಗಳಲ್ಲಿ ಒಂದಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ನ ಕೊನೆಯ ದಿನವಾದ ಇಂದು ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಟಾರ್ಟಪ್ ಉದ್ಯಮಗಳು ಆರ್ಥಿಕತೆಗೆ ಬೂಸ್ಟರ್ ಡೋಸ್ ಆಗಿ ಕೆಲಸ ಮಾಡುತ್ತಿವೆ. ಜಗತ್ತಿನ ಆರ್ಥಿಕ ಟ್ರೆಂಡ್ ಹೆಚ್ಚಿಸಲು ಸ್ಟಾರ್ಟಪ್‌ಗಳು ನೆರವಾಗಿವೆ. ಮಾತ್ರವಲ್ಲ, ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದೆ, ಈ ಹಿಂದೆ ಎರಡಂಕಿಯಲ್ಲಿದ್ದ ಹಣದುಬ್ಬರ ಈಗ ಒಂದಂಕಿಗೆ ಇಳಿದಿದೆ. ಇವತ್ತಿನ ಆರ್ಥಿಕ ಒತ್ತಡದಲ್ಲೂ ಭಾರತದ ಹಣದುಬ್ಬರವನ್ನು ಶೇ. 6.8ಗೆ ತರುವಲ್ಲಿ ನಾವು ಯಶಸ್ವಿ ಆಗಿದ್ದೇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ಬೆಂಗಳೂರು ಸ್ಟಾರ್ಟಪ್‌ಗಳು ಬೆಳೆಯಲು ಉತ್ತಮ ನಗರ. ಸ್ಟಾರ್ಟಪ್‌ಗಳಿಗೆ ಅವಕಾಶ ಕೊಡುವ ಮೂಲಕ ಭಾರತದ ಆರ್ಥಿಕ ವೃದ್ಧಿಗೆ ಬೆಂಗಳೂರು ಪೂರಕವಾಗಿದೆ. ನಮ್ಮ ಸರ್ಕಾರ ಇ-ಕಾಮರ್ಸ್ ಉದ್ಯಮದಲ್ಲಿ ಪ್ರಜಾಪ್ರಭುತ್ವ ನೀತಿಗಳನ್ನು ಜಾರಿ ಮಾಡಿದ್ದು, 2047ರ ಹೊತ್ತಿಗೆ 30 ಟ್ರಿಲಿಯನ್ ಡಾಲರ್ ಆರ್ಥಿಕ ದೈತ್ಯ ಶಕ್ತಿಯಾಗಿ ಭಾರತ ಬೆಳೆಯಲಿದೆ. ಮಾತ್ರವಲ್ಲ ಜಗತ್ತಿನ ಟಾಪ್-3 ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.