ಸಿಡ್ನಿ: ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ತಂಡ ನಾಲ್ಕು ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸುವ ಶನಿವಾರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಇದರ ಪರಿಣಾಮ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟಿ20 ಟೂರ್ನಿಯಿಂದ ಹೊರಬಿದ್ದಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಗ್ರೂಪ್ ಒಂದರ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು.
ಗೆಲುವಿಗೆ 142 ರನ್ ಗಳ ಗುರಿ ಬೆನ್ನತ್ತಿದ ಬೆನ್ ಸ್ಟೋಕ್ಸ್ ತಂಡ 19.4 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 144 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ಸಮಯೋಚಿತ ಬ್ಯಾಟಿಂಗ್ ನಡೆಸಿದ ಬೆನ್ ಸ್ಟೋಕ್ಸ್ ಅಜೇಯ 42 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿದರು. ಈ ಗೆಲುವಿನೊಂದಿಗೆ ಗ್ರೂಪ್ 1 ಹಂತದಿಂದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ.
ಶ್ರೀಲಂಕಾ ಪರ ವನಿಂದು ಹಸರಂಗಾ ಅವರು ಎರಡು ವಿಕೆಟ್ ಹಾಗೂ ಧನಂಜಯ ಡಿ ಸಿಲ್ವಾ ಅವರು ಎರಡು ವಿಕೆಟ್ ಪಡೆದು ಮಿಂಚಿದರು.
ಇಂಗ್ಲೆಂಡ್ ಪರ ಮಾರ್ಕ್ ವುಡ್ (3/26) ಮೂರು ವಿಕೆಟ್ ಪಡೆದರೆ, ಬೆನ್ ಸ್ಟೋಕ್ಸ್ (1/24), ಕ್ರಿಸ್ ವೋಕ್ಸ್ (1/24), ಸ್ಯಾಮ್ ಕರ್ರಾನ್ (1/27) ಮತ್ತು ಆದಿಲ್ ರಶೀದ್ (1/16) ತಲಾ ಒಂದು ವಿಕೆಟ್ ಪಡೆದರು.