ನವದೆಹಲಿ: ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ 20 ಕಡತಗಳನ್ನು ಸುಪ್ರೀಂಕೋರ್ಟ್ ಕೊಲಿಜಿಯಂಗೆ ವಾಪಸ್ ಕಳುಹಿಸಿರುವ ಕೇಂದ್ರ ಸರ್ಕಾರ, ಮರುಪರಿಶೀಲಿಸುವಂತೆ ಹೇಳಿದೆ.
'ಕೊಲಿಜಿಯಂ ಮಾಡಿರುವ ಕೆಲ ಶಿಫಾರಸುಗಳ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ಹೊರಹಾಕಿದೆ.
ಈ ಕಾರಣಕ್ಕಾಗಿ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಶಿಫಾರಸುಗಳಿರುವ ಕಡತಗಳನ್ನು ಕೊಲಿಜಿಯಂಗೆ ನ. 25ರಂದು ವಾಪಸು ಕಳಿಸಿದೆ' ಎಂದು ಮೂಲಗಳು ಹೇಳಿವೆ.
20 ಹೆಸರುಗಳ ಪೈಕಿ 11 ಹೆಸರುಗಳು ಹೊಸಬರದ್ದಾಗಿವೆ. 9 ಜನರ ಹೆಸರುಗಳನ್ನೇ ಪುನಃ ಶಿಫಾರಸು ಮಾಡಲಾಗಿದೆ ಎಂದು ಇವೇ ಮೂಲಗಳು ಹೇಳಿವೆ.
ತಾನು ಸಲಿಂಗಿ ಎಂಬುದಾಗಿ ಹೇಳಿಕೊಂಡಿರುವ ಹಿರಿಯ ವಕೀಲ ಸೌರಭ್ ಕೃಪಾಲ್ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ. ಕೃಪಾಲ್ ಅವರು ನಿವೃತ್ತ ಸಿಜೆಐ ಬಿ.ಎನ್.ಕೃಪಾಲ್ ಅವರ ಪುತ್ರ.
'ನನಗೆ ಬಡ್ತಿ ನೀಡುವಲ್ಲಿ ಆಗುತ್ತಿರುವ ವಿಳಂಬಕ್ಕೆ ನಾನು ಸಲಿಂಗಿ ಆಗಿರುವುದೇ ಕಾರಣ' ಎಂಬುದಾಗಿ ಅವರು ಇತ್ತೀಚೆಗೆ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಈ ಹಿಂದೆ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿದ್ದ ಎನ್.ವಿ.ರಮಣ ನೇತೃತ್ವದ ಕೊಲಿಜಿಯಂ, ಕೃಪಾಲ್ ಅವರಿಗೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ಕಳೆದ ವರ್ಷ ಶಿಫಾರಸು ಮಾಡಿತ್ತು. ಇದಕ್ಕೂ ಮುನ್ನ, ಕೃಪಾಲ್ ಅವರ ಹೆಸರನ್ನು ಶಿಫಾರಸು ಮಾಡುವ ನಿರ್ಧಾರವನ್ನು ಕೊಲಿಜಿಯಂ ಮೂರು ಬಾರಿ ಮುಂದೂಡಿತ್ತು.
ಕೊಲಿಜಿಯಂ ಕಳುಹಿಸಿದ್ದ ಹೆಸರುಗಳನ್ನು ಅನುಮೋದಿಸುವಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ವಿಳಂಬದ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರವಷ್ಟೇ ತನ್ನ ಅಸಮಾಧಾನವನ್ನು ಹೊರಹಾಕಿದೆ.