ಕಾಸರಗೋಡು: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ಗ್ರಾಮ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಜನರ ಸಮಸ್ಯೆಗಳನ್ನು ಸನಿಹದಿಂದ ಕಂಡುಕೊಳ್ಳುತ್ತಿದ್ದು, ಪ್ರತಿ ಗುರುವಾರ ಮತ್ತು ಶುಕ್ರವಾರ ಗ್ರಾಮ ಕಚೇರಿಗೆ ಭೇಟಿ ನೀಡಲು ದಿನ ಕಾಯ್ದಿರಿಸಿದ್ದಾರೆ.
ಗುರುವಾರ ಬೇಳ, ನೀರ್ಚಾಲ್, ಬದಿಯಡ್ಕ ಗ್ರಾಮಗಳ ಕಚೇರಿಗಳಿಗೆ ಭೇಟಿ ನೀಡಲಾಯಿತು. ಗ್ರಾ.ಪಂ.ಕಚೇರಿ ತಲುಪಿದ ಜಿಲ್ಲಾಧಿಕಾರಿ ಏಳು ದೂರುಗಳನ್ನು ಸ್ವೀಕರಿಸಿದರು. ಬೇಸಾಯ ಮಾಡುತ್ತಿದ್ದರೂ ಕೂಲಿಕಾರ್ಮಿಕರ ಅಭಾವದಿಂದ ಸೂಕ್ತ ರೀತಿಯಲ್ಲಿ ಕೃಷಿ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ವ್ಯಕ್ತಪಡಿಸಿದರು. ಗದ್ದೆಯಲ್ಲಿ ಬೆಳೆದ ಪೈರನ್ನು ಕಟಾವು ಮಾಡಲು ಕಾರ್ಮಿಕರು ಸಿಗದ ಕಾರಣ ಕೃಷಿಯನ್ನೇ ಕೈಬಿಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎಂದು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು. ಬೇಳ ಗ್ರಾಮ ಕಛೇರಿ ವ್ಯಾಪ್ತಿಯಲ್ಲಿ ಮಾದಕ ವ್ಯಸನ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ತಿಳಿಸಲಾಯಿತು. ಜಿಲ್ಲಾಧಿಕಾರಿ ಬದಿಯಡ್ಕ ಗ್ರಾಮ ಕಚೇರಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದರು.
ಕಾಸರಗೋಡು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಗ್ರಾಮ ಕಚೇರಿಗಳಿಗೆ ಭೇಟಿ ನೀಡಲಾಗುತ್ತಿದ್ದು, ಜನರು ಭೇಟಿಯ ಮೊದಲು ಅಥವಾ ಭೇಟಿಯ ಸಮಯದಲ್ಲಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳನ್ನು ತಿಳಿಸಬಹುದಾಗಿದೆ. ಗ್ರಾಮ ಕಚೇರಿಗೆ ಬರುವ ದೂರುದಾರರ ಕುಂದುಕೊರತೆಗಳನ್ನು ಆಲಿಸಿ ದಾಖಲಿಸಿಕೊಳ್ಳಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಖಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಅಕ್ಟೋಬರ್ 6ರಂದು ಆರಂಭವಾದ ಭೇಟಿಯಲ್ಲಿ ಇದುವರೆಗೆ 25 ಗ್ರಾಮಗಳಿಗೆ ಭೇಟಿ ನೀಡಲಾಗಿದ್ದು, ಡಿ.23ರವರೆಗೆ ಗ್ರಾಮ ಕಚೇರಿಗಳಿಗೆ ಜಿಲ್ಲಾಧಿಕಾರಿಗಳ ಭೇಟಿ ಮುಂದುವರಿಯಲಿದೆ. ನವೆಂಬರ್ 11 ರಂದು (ಶುಕ್ರವಾರ) ಅಂಬಲತ್ತರ ಮತ್ತು ಪುಲೂರು ಗ್ರಾಮ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ.
ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ: ಇದುವರೆಗೆ 25 ಗ್ರಾಮ ಕಚೇರಿಗಳಿಗೆ ಭೇಟಿ
0
ನವೆಂಬರ್ 10, 2022