ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲದಲ್ಲಿ ಮಂಡಲಪೂಜಾ ಮಹೋತ್ಸವಕ್ಕಾಗಿ ನ. 16ರಂದು ಸಂಜೆ 5ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ದೇಗುಲ ತಂತ್ರಿ ಕಂಠರರ್ ರಾಜೀವರ್ ಸಾನ್ನಿಧ್ಯದಲ್ಲಿ ಮುಖ್ಯ ಅರ್ಚಕ ಎನ್. ಪರಮೇಶ್ವರನ್ ನಂಬೂದಿರಿ ಗರ್ಭಗುಡಿ ಬಾಗಿಲು ತೆರೆದು ದೀಪಾರಾಧನೆ ನಡೆಸುವರು. ಇದೇ ಸಂದರ್ಭ ಮಾಳಿಗಪುರತ್ತಮ್ಮ ದೇವಸ್ಥಾನದ ಬಾಗಿಲನ್ನೂ ತೆರೆಯಲಾಗುವುದು.
17ರಂದು ಬೆಳಗ್ಗೆ ಶ್ರೀದೇವರಿಗೆ ತುಪ್ಪಾಭಿಷೇಕ ಆರಂಭಗೊಳ್ಳಲಿದೆ. ಡಿ. 17ರಿಂದ 27ರ ವರೆಗೆ ಮಂಡಲ ಪೂಜಾ ಮಹೋತ್ಸವ ನಡೆಯುವುದು. 27ರಂದು ಶ್ರೀ ಅಯ್ಯಪ್ಪ ವಿಗ್ರಹಕ್ಕೆ ಚಿನ್ನದ ಅಂಗಿ(ತಂಗ ಅಂಗಿ)ತೊಡಿಸುವ ಮೂಲಕ ದೀಪಾರಾಧನೆಯೊಂದಿಗೆ ಮಂಡಲ ಪೂಜೆ ನಡೆಯುವುದು. ರಾತ್ರಿ 10ಕ್ಕೆ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು.
30ರಿಂದ ಮಕರಸಂಕ್ರಮಣ ತೀರ್ಥಾಟನೆ:
ಮಕರ ಜ್ಯೋತಿ ತೀರ್ಥಾಟನೆಗಾಗಿ ಡಿ. 30ರಂದು ಮತ್ತೆ ದೇಗುಲದ ಬಾಗಿಲು ತೆರೆದುಕೊಳ್ಳಲಿದ್ದು, 31ರಂದು ಬೆಳಗ್ಗೆ ತುಪ್ಪಾಭಿಷೇಕ ಆರಂಭಗೊಳ್ಳುವುದು. 2023 ಜ. 14ರಂದು ಶ್ರೀಅಯ್ಯಪ್ಪ ವಿಗ್ರಹಕ್ಕೆ ಪವಿತ್ರ ಚಿನ್ನಾಭರಣ ತೊಡಿಸುವ ಮೂಲಕ ದೀಪಾರಾಧನೆಯೊಂದಿಗೆ ಮಕರ ಜ್ಯೋತಿ ದರ್ಶನವಾಗಲಿದೆ.
ಪಂಪೆಯಲ್ಲಿ ವಾಹನದಟ್ಟಣೆ ಕಡಿತಗೊಳಿಸುವ ನಿಟ್ಟಿನಲ್ಲಿ ನೀಲಕ್ಕಲ್‍ನಿಂದ ಪಂಪೆಗೆ ಕೆಎಸ್ಸಾರ್ಟಿಸಿ ಬಸ್‍ಗಳು ಸರ್ವೀಸ್ ನಡೆಸಲಿದೆ. ಹದಿನೈದು ಸೀಟುಗಳಿಗಿಂತ ಕಡಿಮೆಯಿರುವ ವಾಹನಗಳು ಪ್ರಯಾಣಿಕರನ್ನು ಪಂಪೆಯಲ್ಲಿ ಇಳಿಸಿ ಮರಳಿ ನೀಲಕ್ಕಲ್‍ಗೆ ಆಗಮಿಸಬೇಕು. ಇತರ ದೊಡ್ಡ ವಾಹನಗಳು ನೀಲಕಲ್ಲಿನಲ್ಲಿ ಪಾರ್ಕ್ ಮಾಡಬೇಕು. ಪರಂಪರಾಗದ ಕಾನನ ಹಾದಿಯಲ್ಲಿ ಆಹಾರ, ವಿಶ್ರಾಂತಿ ಕೇಂದ್ರ, ವೈದ್ಯಕೀಯ ಸೌಲಭ್ಯ ಏರ್ಪಡಿಸಲಾಗಿದೆ. ಪ್ಲಾಸ್ಟಿಕ್ ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ.
ಮಂಡಲ ಪೂಜೆಗಾಗಿ ಇಂದು ತೆರೆದುಕೊಳ್ಳಲಿದೆ ಶಬರಿಮಲೆ ಬಾಗಿಲು: 27ರಿಂದ ಮಂಡಲ ಮಹೋತ್ಸವ
0
ನವೆಂಬರ್ 15, 2022
Tags