ಮೊರ್ಬಿ: ಕಳೆದ ತಿಂಗಳು 140ಕ್ಕೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಂಡ ಮೊರ್ಬಿ ತೂಗುಸೇತುವೆ(Morbi suspension bridge)ಕುಸಿತ ಕುರಿತು ತನಿಖೆಯು ಸೇತುವೆಯ ನವೀಕರಣ ಮತ್ತು ಪುನರಾರಂಭಗೊಂಡ ಬಳಿಕ ನಿರ್ವಹಣೆಯಲ್ಲಿ ಭಾರೀ ಲೋಪಗಳನ್ನು ಬೆಳಕಿಗೆ ತಂದಿದ್ದು,ಗುತ್ತಿಗೆದಾರ ಒರೆವಾ ಗ್ರೂಪ್(Orewa Group)ಮತ್ತು ಸ್ಥಳೀಯ ನಗರಸಭೆಯ ಕುರಿತು ಹಲವು ಪ್ರಶ್ನೆಗಳೆದ್ದಿವೆ.
ತೂಗು ಸೇತುವೆಯ ನಿರ್ವಹಣೆ,ಕಾರ್ಯಾಚರಣೆ ಮತ್ತು ಸುರಕ್ಷತೆಯ ಗುತ್ತಿಗೆಯನ್ನು ಪಡೆದಿದ್ದ ಒರೆವಾ ಗ್ರೂಪ್ ದುರಂತ ಸಂಭವಿಸಿದ ಅ.30ರಂದು 3,165ರಷ್ಟು ಅಗಾಧ ಸಂಖ್ಯೆಯಲ್ಲಿ ಟಿಕೆಟ್ ಗಳನ್ನು ವಿತರಿಸಿತ್ತು ಎಂದು ಮಂಗಳವಾರ ಜಿಲ್ಲಾ ನ್ಯಾಯಾಲಯದಲ್ಲಿ ವಿಧಿವಿಜ್ಞಾನ ತನಿಖಾ ವರದಿಯನ್ನು ಸಲ್ಲಿಸಿದ ಸಂದರ್ಭದಲ್ಲಿ ಸರಕಾರಿ ವಕೀಲರು ತಿಳಿಸಿದರು. ಎಲ್ಲ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿರಲಿಲ್ಲ,ಆದರೆ ಯಾವುದೇ ಸಂದರ್ಭದಲ್ಲಿಯೂ ಕಂಪನಿಯು ಶತಮಾನದ ಹಿಂದೆ ನಿರ್ಮಾಣಗೊಂಡಿದ್ದ ಸೇತುವೆಯ ಭಾರವನ್ನು ಹೊರುವ ಸಾಮರ್ಥ್ಯದ ಮೌಲ್ಯಮಾಪನ ನಡೆಸಿರಲಿಲ್ಲ ಎಂದು ಅವರು ಹೇಳಿದರು.
ಸೇತುವೆಯ ಕೇಬಲ್ ಗಳು ತುಕ್ಕು ಹಿಡಿದಿದ್ದವು,ಅದರ ಆಧಾರ ಸ್ತಂಭಗಳು ಮುರಿದಿದ್ದವು,ಸ್ತಂಭಗಳಿಗೆ ಕೇಬಲ್ ಗಳನ್ನು ಜೋಡಿಸಿದ್ದ ಬೋಲ್ಟ್ ಗಳೂ ಸಡಿಲಾಗಿದ್ದವು ಎಂದು ವರದಿಯು ತಿಳಿಸಿದೆ. ಗುತ್ತಿಗೆದಾರರು ಅಳವಡಿಸಿದ್ದ ಹೊಸ,ಭಾರೀ ಗಾತ್ರದ ನೆಲಹಾಸಿನ ಹಲಗೆಗಳ ಭಾರವನ್ನು ತಡೆದುಕೊಳ್ಳಲು ಕೇಬಲ್ ಗಳಿಗೆ ಸಾಧ್ಯವಾಗಿರಲಿಲ್ಲ ಎನ್ನುವುದನ್ನು ಪ್ರಾಥಮಿಕ ತನಿಖೆಯು ಸೂಚಿಸಿತ್ತು.
ಒರೆವಾ ನಿಯೋಜಿಸಿದ್ದ ಕಾವಲುಗಾರರು ಮತ್ತು ಟಿಕೆಟ್ ಸಂಗ್ರಾಹಕ ದಿನಗೂಲಿ ಕಾರ್ಮಿಕರಾಗಿದ್ದು,ಅವರು ಗುಂಪು ನಿರ್ವಹಣೆಯಲ್ಲಿ ಪರಿಣತಿಯನ್ನು ಹೊಂದಿರಲಿಲ್ಲ ಎಂದು ಸರಕಾರಿ ವಕೀಲರು ಈವರೆಗೆ ಬಂಧಿತ ಒಂಭತ್ತು ಸಿಬ್ಬಂದಿಗಳ ಜಾಮೀನು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ತಿಳಿಸಿದರು. 'ಅಜಂತಾ' ('Ajanta')ಗಡಿಯಾರಗಳಿಗಾಗಿ ಪ್ರಸಿದ್ಧವಾಗಿರುವ ಒರೆವಾದ ಉನ್ನತ ಆಡಳಿತ ಮಂಡಳಿಯ ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ.
ಸುರಕ್ಷತಾ ಶಿಷ್ಟಾಚಾರಗಳ ಬಗ್ಗೆ ಅಥವಾ ಸೇತುವೆಯ ಮೇಲೆ ಎಷ್ಟು ಜನರನ್ನು ಬಿಡಬೇಕು ಎನ್ನುವುದನ್ನು ಎಂದಿಗೂ ಕಾವಲುಗಾರರಿಗೆ ತಿಳಿಸಿರಲಾಗಿರಲಿಲ್ಲ ಎಂದು ವರದಿಯು ಹೇಳಿದೆ.
ಸುರಕ್ಷತೆಗೆ ಒರೆವಾ ಹೊಣೆಯಾಗಿತ್ತು. ಆದರೆ ಅದು ಅವಘಡದ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ಜೀವರಕ್ಷರನ್ನು ಅಥವಾ ದೋಣಿಗಳನ್ನೂ ನಿಯೋಜಿಸಿರಲಿಲ್ಲ ಎಂದು ಜಿಲ್ಲಾ ಸರಕಾರಿ ವಕೀಲ ವಿಜಯ ಜಾನಿ ಸುದ್ದಿಸಂಸ್ಥೆಗೆ ತಿಳಿಸಿದರು.