HEALTH TIPS

ಒಂದು ಒಲೆಯ ಕಥೆ: ಮೊದಲ ಮೈಕ್ರೋವೇವ್‌ ಓವನ್ನು 340 ಕೆ.ಜಿ ತೂಕವಿತ್ತಂತೆ!

 

ಬೆಳಿಗ್ಗೆ ಎದ್ದು ಸ್ನಾನ ಮಾಡುವಾಗಲೂ ವಿಜ್ಞಾನದ ಬಗ್ಗೆಯೇ ಯೋಚಿಸಿ, ಚಿಂತನೆಯ ಚಕ್ರಸುಳಿಯಲ್ಲಿ ಮುಳುಗೇಳುತ್ತಾ ಪ್ರಯೋಗಾಲಯಕ್ಕೆ ತಲುಪಿ, ಬೆರಗುಗಣ್ಣುಗಳನ್ನು ನೆಟ್ಟು ಕೂತು, ಜ್ಞಾನೋದಯದ ದಿವ್ಯಗಳಿಗೆಗೆ ಕಾದು, ಹೊಸ ಹೊಳಪೊಂದರ ಮುಖಾಮುಖಿಗೆ ಸನ್ನದ್ಧನಾಗಿ ತಪಸ್ಸು ಮಾಡುತ್ತಾ ಕುಳಿತ ವಿಜ್ಞಾನಿಯ ಬೊಗಸೆಗೆ ಮಾತ್ರ ಯಾವುದಾದರೂ ಸಂಶೋಧನೆ ಬಂದು ಬೀಳುತ್ತದೆ ಎಂಬ ಕಲ್ಪನೆ ನಮಗೆಲ್ಲ; ಅಥವಾ ಕೆಲವರಿಗಾದರೂ ಇಂಥ ಕಲ್ಪನೆ ಇರುತ್ತದೆ.

ಆದರೆ ವಾಸ್ತವ ಹಾಗೇನೂ ಇಲ್ಲ. ಏನೋ ಮಾಡಲು ಹೋಗಿ ಏನೋ ಆಗುವುದು, ಜೀವನದಂತೆ ವಿಜ್ಞಾನದ ಕ್ಷೇತ್ರದಲ್ಲಿಯೂ ಮಾಮೂಲಿಯೇ. 'The difference between fiction and nonfiction is that fiction must be absolutely believable' ಎಂಬ ಮಾರ್ಕ್ ಟ್ವೇನನ ಮಾತು ವಿಜ್ಞಾನದ ಪ್ರಸಂಗಗಳಲ್ಲಿ ಎಷ್ಟೋ ಸಲ ನಿಜವಾಗುವುದಿದೆ. ಸುಮ್ಮನೆ ಕಡಲ ಕಿನಾರೆಯಲ್ಲಿ ನಡೆಯುತ್ತಿದ್ದವನ ಕೈಯಲ್ಲಿಯೇ ಬಂದು ಕುಳಿತ ಪುಟ್ಟ ಪಾತರಗಿತ್ತಿಯ ರೆಕ್ಕೆ ಮುಟ್ಟಿ ಸಂಭ್ರಮ ಪಡುವಂತೆ ವಿಜ್ಞಾನಿಗಳಿಗೂ ಆಗುವುದಿದೆ. ಹಾಗೆ ಅನಿರೀಕ್ಷಿತವಾಗಿ ಏನನ್ನೋ ಕಂಡುಕೊಂಡ ವಿಜ್ಞಾನಿಗಳ ಕಥೆಗಳು ಬೇಕಾದಷ್ಟು ಸಿಗುತ್ತವೆ.

ಉದಾಹರಣೆಗೆ, 1856ರಲ್ಲಿ ವಿಲಿಯಂ ಹೆನ್ರಿ ಪರ್ಕಿನ್ ಎಂಬ ವಿಜ್ಞಾನಿ ಮಲೇರಿಯಾಕ್ಕೆ ಔಷಧಿಯಾದ 'ಕ್ವಿನೈನ್' ಅನ್ನು ರಾಸಾಯನಿಕ ಮಿಶ್ರಣಗಳ ಸಂಯೋಜನೆಯಿಂದ ತಯಾರಿಸ ಹೊರಟಿದ್ದ. ಆದರೆ ಕ್ವಿನೈನು ಉತ್ಪತ್ತಿಯಾಗಲಿಲ್ಲ. ಅವನ ಬೀಕರಿನಲ್ಲಿ ಉಳಿದದ್ದು ಕಂದುಬಣ್ಣದ ಅನುಪಯುಕ್ತವಾದ ರಾಡಿ. ಸರಿ, ಇದನ್ನು ತೊಳೆದು ಕೈತೊಳೆದುಕೊಳ್ಳೋಣ ಎಂದು ಬೀಕರಿಗೆ ಆಲ್ಕೋಹಾಲು ಹಾಕಿ ತೊಳೆದರೆ, ನೋಡ ನೋಡುತ್ತಿದ್ದಂತೆ ಒಳಗಿದ್ದದ್ದು ನೇರಳೆಬಣ್ಣಕ್ಕೆ ತಿರುಗಿ ಲಕ ಲಕಿಸತೊಡಗಿತು! ಈಗಿನ ಕೈಗಾರಿಕೆಗಳಿಗೆ ಆಗುವಂತೆ ಬಣ್ಣಗಳನ್ನು ದೊಡ್ಡಮಟ್ಟದಲ್ಲಿ ಕೃತಕವಾಗಿ, ರಾಸಾಯನಿಕವಾಗಿ ತಯಾರಿಸುವ ವಿಧಾನ ಅಲ್ಲಿಂದಲೇ ಬಂದದ್ದು. ಅದಕ್ಕೂ ಮೊದಲು ಸಸ್ಯಗಳಿಂದ, ಪ್ರಾಣಿಗಳಿಂದ, ಖನಿಜಗಳಿಂದ ವರ್ಣಗಳನ್ನು ಸೃಷ್ಟಿಸಲಾಗುತ್ತಿತ್ತು. ಪ್ರಯೋಗವೇ ಊಸರವಳ್ಳಿಯಂತೆ ಬಣ್ಣ ಬದಲಾಯಿಸಿ(!), ವರ್ಣದ್ರವ್ಯವನ್ನು ಕೊಟ್ಟ ಕಥೆಯಿದು. ಇದು ಹೀಗಾದರೆ, ಕೃತಕವಾದ ಬಣ್ಣಕ್ಕೆ ಅಂತಲೇ ತಯಾರಾಗಿ ಕಡೆಗೆ ಬೇರೆಯೇ ರೀತಿ ಬಳಕೆಯಾದದ್ದು ಟಿ.ಎನ್.ಟಿ. ಜೋಸೆಫ್ ವಿಲ್ಬ್ರಾಂಡ್ ಎಂಬ ಜರ್ಮನ್ ವಿಜ್ಞಾನಿಯೊಬ್ಬ ಕೃತಕವಾಗಿ ಹಳದಿರಂಗನ್ನು ತಯಾರಿಸುವ ವಿಧಾನವಾಗಿ ಟಿ.ಎನ್.ಟಿ.ಯನ್ನು ಬಳಸಿದ್ದ. ಅದು ಭಯಾನಕ ಸಿಡಿಮದ್ದಾಗಿ ಯುದ್ಧಗಳಲ್ಲಿ ಬಳಕೆಯಾದದ್ದು ಕೆಲವು ದಶಕಗಳ ಅನಂತರವೇ. ಈಗ ಅದರ ಬಿಸಿಯಿಲ್ಲದಿದ್ದರೆ ಅಡುಗೆ ಮಾಡುವವರ ತಲೆಯೇ ಬಿಸಿಯಾಗುತ್ತದೆ ಎಂಬಂತಿರುವ ಮೈಕ್ರೋವೇವ್ ಓವನ್ನಿನದ್ದೂ ಅಂಥದ್ದೇ ಒಂದು ವೃತ್ತಾಂತ.

ಅದು ಎರಡನೇ ಮಹಾಯುದ್ಧದ ಕಾಲದಲ್ಲಿ ನಡೆದ ಪ್ರಸಂಗ. ಅಮೆರಿಕ ಮತ್ತದರ ಮಿತ್ರಪಕ್ಷಗಳಿಗೆ ಯುದ್ಧಸಾಮಗ್ರಿಗಳನ್ನು ರೇಥಿಯೋನ್ ಎಂಬ ಸಂಸ್ಥೆ ಮಾಡಿಕೊಡುತ್ತಿತ್ತು. ಅದರಲ್ಲಿ ಒಳ್ಳೆಯ ಕೆಲಸಗಾರ ಎಂಬ ಹೆಸರು ಗಳಿಸಿ, ಹೊಸ ಹೊಸ ಉತ್ಪನ್ನಗಳನ್ನು ರೂಪಿಸಿ ಪೇಟೆಂಟಿನ ಮೇಲೆ ಪೇಟೆಂಟುಗಳನ್ನು ಗುಡ್ಡೆ ಹಾಕುತ್ತಿದ್ದವನು ಪರ್ಸಿ ಸ್ಪೆನ್ಸರ್ ಎಂಬ ಎಂಜಿನಿಯರು. ಆಗಿನ ಯುದ್ಧಗಳಲ್ಲಿ ರಾಡಾರ್ ತಂತ್ರಜ್ಞಾನ ಸೈನ್ಯಗಳಿಗೆ ತುಂಬ ಸಹಾಯ ಮಾಡುತ್ತಿತ್ತು. ಈ ರಾಡಾರಿನ ಕ್ಷೇತ್ರದಲ್ಲಿ ಏನಾದರೂ ಕಡಿದು ಕಟ್ಟೆ ಹಾಕಬೇಕೆಂದು ಹೊರಟವನು ನಮ್ಮ ಸ್ಪೆನ್ಸರ್. ಅವನು ಕೆಲಸ ಮಾಡುತ್ತಿದ್ದದ್ದು ಮ್ಯಾಗ್ನೆಟ್ರಾನ್ ಎಂಬ ಯಂತ್ರದ ಮೇಲೆ. ರಾಡಾರುಗಳಿಗೆ ಬೇಕಾದ ರೇಡಿಯೋ ಸಿಗ್ನಲ್ಲುಗಳನ್ನು ಹೊರಡಿಸುತ್ತಿದ್ದ ಯಂತ್ರ ಅದು. ಈ ಸ್ಪೆನ್ಸರನಿಗೆ ಅಳಿಲುಗಳು ಅಂದರೆ ಅಚ್ಚುಮೆಚ್ಚು. ಅವುಗಳಿಗೆ ಮಧ್ಯಾಹ್ನ ಊಟದ ಹೊತ್ತಿನಲ್ಲಿ ತಿನ್ನಿಸಲಿಕ್ಕೆ ಅಂತ (ನಮ್ಮಲ್ಲಿ ಕಡಲೆ ಮತ್ತು ಬೆಲ್ಲ ಸೇರಿಸಿ ಮಾಡುವ ಚಿಕ್ಕಿಯನ್ನು ಹೋಲುವ) 'ಪೀನಟ್‌ ಕ್ಲಸ್ಟರ್‌ ಬಾರ್‌'(peanut cluster bar)ಅನ್ನು ಕಿಸೆಯಲ್ಲಿಟ್ಟುಕೊಂಡಿದ್ದನಂತೆ. ಈ ಮ್ಯಾಗ್ನೆಟ್ರಾನುಗಳ ಹತ್ತಿರ ಒಂದಷ್ಟು ಹೊತ್ತು ಕಳೆದು ಇನ್ನೇನು ಊಟಕ್ಕೆ ಹೊರಡಬೇಕು, ಪುಟ್ಟ ಅಳಿಲುಗಳಿಗೆ ಕಡ್ಲೆ ಚಾಕಲೇಟು ತಿನ್ನಿಸಬೇಕು ಎಂದು ಪ್ಯಾಂಟಿನ ಕಿಸೆಗೆ ಕೈ ಹಾಕಿದರೆ, ಅರೆ! ಚಾಕಲೇಟು ಕರಗಿ ಪ್ಯಾಂಟಿಗೆ ಮೆತ್ತಿಕೊಂಡಿದೆ!! ಇದೊಳ್ಳೆ ಇರುಸು ಮುರುಸಾಯ್ತಲ್ಲ, ಪ್ಯಾಂಟು ತೊಳೆಯುವ ತಾಪತ್ರಯವಾಯಿತಲ್ಲ ಎಂದು ರೇಗುವ ಬದಲಿಗೆ ಅವನ ಒಳಗಿದ್ದ ಸಂಶೋಧಕ ಎದ್ದು ನಿಂತ.

ಮರುದಿನ ಮೊಟ್ಟೆಯಿಂದನ್ನು ತಂದು ಅದೇ ಮ್ಯಾಗ್ನೆಟ್ರಾನಿನ ಕೆಳಗೆ ಹಿಡಿದು ನೋಡಿದ, ಯಾಕಾದರೂ ಇಂಥ ಎಡವಟ್ಟು ಪ್ರಯೋಗ ಮಾಡಿದೆನಪ್ಪ ಎಂದು ಕೈ ಹಿಸುಕಿಕೊಂಡನೋ ಎಂಬುದು ನಿಮ್ಮ ಊಹೆಗೆ ಬಿಟ್ಟ ವಿಚಾರ; ಯಾಕೆಂದರೆ ಆ ಮೊಟ್ಟೆ ಢಮೀಲನೆ ಸಿಡಿದು, ಮುಸುಡಿಗೆ ಪೋಕರಿ ಗೆಳೆಯರು ಹೋಳಿಯ ದಿನ ಅಭಿಷೇಕ ಮಾಡಿದಂತೆ ಆಗಿತ್ತು. ವಿಷಯವನ್ನು ಇಷ್ಟಾದ ಮೇಲೂ ಕೈಬಿಡಲಿಲ್ಲ ಈ ಆಸಾಮಿ. ಮರುದಿನ ಪಾಪ್ ಕಾರ್ನನ್ನು ತಂದು ಮತ್ತದೇ ಮ್ಯಾಗ್ನೆಟ್ರಾನಿನ ಹತ್ತಿರ ಹಿಡಿದು ನೋಡಿದ, ಪಾಪ್ ಕಾರ್ನು ಥಕ ಥಕ ಕುಣಿದು, ಸಿಡಿದು ಚೆಲ್ಲಾಪಿಲ್ಲಿಯಾಗಿ ಚೆಲ್ಲಿತು. ಆ ಕಂಪೆನಿಯಲ್ಲಿ ಕಸಗುಡಿಸುವವರು ಈ ವಿಜ್ಞಾನಿಗೆ ಯಾರಾದರೂ ಕೆಲಸ ಕೊಟ್ಟರೋ ಎಂದು ಶಾಪ ಹಾಕಿರಬೇಕು! ಅಂತೂ ಆದದ್ದಕ್ಕೆಲ್ಲ ಥಳಕು ಹಾಕಿ ನೋಡಿದಾಗ, ಆಹಾರಪದಾರ್ಥಗಳು ಬೇಯಲಿಕ್ಕೆ ಬೆಂಕಿಯೇ ಬೇಕಾಗಿಲ್ಲ ಎಂಬ ಅರಿವು ಮೂಡಿತು. ಎಲ್ಲಿಯ ಯುದ್ಧ, ಎಲ್ಲಿಯ ರಾಡಾರು, ಎಲ್ಲಿಯ ಮ್ಯಾಗ್ನೆಟ್ರಾನು, ಎಲ್ಲಿಯ ಅಡುಗೆ ಒಲೆ! ಅಂತೂ ಆ ಒಂದು ದಿನ ಅಳಿಲುಗಳಿಗೆ ಕಡಲೆಯ ಚಾಕಲೇಟು ತಿನ್ನುವ ಭಾಗ್ಯವಿರಲಿಲ್ಲ, ಇದೂ ಒಂದು ತರದ ಅಳಿಲುಸೇವೆಯೇ!

ಇದೆಲ್ಲ ಆಗಿ ಒಂದು ವರ್ಷಕ್ಕೇ ಮೈಕ್ರೋವೇವಿನ ಒಲೆ ಮಾರುಕಟ್ಟೆಗೆ ಬಂತು. ಆ ಮೈಕ್ರೋವೇವು ಓವನ್ನು ಸುಮಾರು ಮುನ್ನೂರ ನಲುವತ್ತು ಕೆ.ಜಿ ಭಾರವಿತ್ತಂತೆ. ಅದರ ಬೆಲೆಯೂ ಭಯಂಕರ ತುಟ್ಟಿ ಎಂಬಂತಿತ್ತು. ಇದಾಗಿ ಇಪ್ಪತ್ತು ವರ್ಷಗಳಾದ ಮೇಲೆಯೇ ಚೆನ್ನಾಗಿ ಮಾರಾಟವಾದ, ಮನೆಯಲ್ಲಿ ಉಪಯೋಗಿಸಲು ಯೋಗ್ಯವಾದ ಮೈಕ್ರೋವೇವಿನ ಒಲೆ ಬಂದದ್ದು.

ಹೀಗೆ ಬಾಳೆಯ ಗಿಡವನ್ನು ನೆಟ್ಟು ಮಾವಿನಹಣ್ಣನ್ನು ಕೊಯ್ಯುವ ಕೆಲಸ ಮಾಡಿದ ವಿಜ್ಞಾನಿಗಳನ್ನು ನೋಡಿದರೆ, 'ಯಾವುದೋ ಬರ್ಫಿ ಮಾಡಹೊರಟು, ಬೇರೆ ಯಾವುದೋ ಹೊಸ ಪಾಕದ ಸಿಹಿತಿಂಡಿ ಆಗಿಹೋಯಿತು' ಎಂದು ಪೆಚ್ಚು ನಗೆ ನಗುವವರ ನೆನಪಾಗುತ್ತದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries