ನವದೆಹಲಿ: ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಭಾರತವು ಕಳೆದ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಗೆ ತಗುಲಲಿದ್ದ ಇಂಧನದ ವೆಚ್ಚದಲ್ಲಿ ₹ 34 ಸಾವಿರ ಕೋಟಿಗೂ ಅಧಿಕ ಉಳಿತಾಯ ಮಾಡಿದೆ.
ಅಲ್ಲದೇ, ದೇಶದಲ್ಲಿ ವಿದ್ಯುತ್ ಉತ್ಪಾದನೆಗಾಗಿ ವ್ಯಯವಾಗಲಿದ್ದ 1.94 ಕೋಟಿ ಟನ್‌ಗಳಷ್ಟು ಕಲ್ಲಿದ್ದಲನ್ನು ಸಹ ಉಳಿತಾಯ ಮಾಡಲಾಗಿದೆ ಎಂದು ಗುರುವಾರ ಬಿಡುಗಡೆಯಾಗಿರುವ ವರದಿಯೊಂದರಲ್ಲಿ ಹೇಳಲಾಗಿದೆ.
ಇಂಧನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಾದ ಇಎಂಬಿಇಆರ್, ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ ಹಾಗೂ ಇನ್ಸ್‌ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಶಿಯಲ್ ಅನಲಿಸಿಸ್ (ಐಇಇಎಫ್‌ಎ), ಈ ವರದಿಯನ್ನು ಸಿದ್ಧಪಡಿಸಿವೆ.
ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಕಳೆದ ದಶಕದಲ್ಲಿ ದೇಶದಲ್ಲಿ ಆಗಿರುವ ಪ್ರಗತಿಯನ್ನು ಸಹ ಈ ಸಂಸ್ಥೆಗಳು ವಿಶ್ಲೇಷಿಸಿವೆ. ಸೌರಶಕ್ತಿ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ವಿಶ್ವದ 10 ದೇಶಗಳ ಪೈಕಿ 5 ಏಷ್ಯಾದಲ್ಲಿವೆ. ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ ಹಾಗೂ ವಿಯೆಟ್ನಾಂ ಈ ಸಾಧನೆ ಮಾಡಿವೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.
'ಭಾರತವು ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಹೆಚ್ಚಿಸಿದೆ. ಇದರಿಂದಾಗಿ, ವಿದ್ಯುತ್ ಉತ್ಪಾದನೆಗೆ ತಗುಲುವ ವೆಚ್ಚ ತಗ್ಗುವ ಜೊತೆಗೆ, ಗ್ರಾಹಕರಿಗೂ ಹೊರೆ ಕಡಿಮೆಯಾಗಲಿದೆ' ಎಂದು ಐಇಇಎಫ್‌ಎ ನಿರ್ದೇಶಕಿ (ದಕ್ಷಿಣ ಏಷ್ಯಾ) ವಿಭೂತಿ ಗರ್ಗ್ ಹೇಳಿದ್ದಾರೆ.