ನವದೆಹಲಿ: 2021-22ನೇ ಶೈಕ್ಷಣಿಕ ವರ್ಷದಲ್ಲಿ ದೇಶದಾದ್ಯಂತ 39 ಶಾಲೆಗಳಿಗೆ ಸ್ವಚ್ಛ ವಿದ್ಯಾಲಯ ಪುರಸ್ಕಾರವನ್ನು ನೀಡಲಾಗಿದೆ ಎಂದು ಶಿಕ್ಷಣ ಸಚಿವಾಲಯ ಶನಿವಾರ ತಿಳಿಸಿದೆ.
ಈ ಪುರಸ್ಕಾರಕ್ಕೆ ಒಟ್ಟು 8.23 ಲಕ್ಷ ಶಾಲೆಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 28 ಸರ್ಕಾರಿ ಮತ್ತು ಅನುದಾನಿತ ಶಾಲೆಗಳು, 11 ಖಾಸಗಿ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಇದರಲ್ಲಿ ಎರಡು ಕಸ್ತೂರ ಬಾ ಗಾಂಧಿ ಬಾಲಕಿಯರ ವಿದ್ಯಾಲಯ, ಒಂದು ನವೋದಯ ವಿದ್ಯಾಲಯ ಮತ್ತು ಮೂರು ಕೇಂದ್ರೀಯ ವಿದ್ಯಾಲಯಗಳು ಸೇರಿವೆ.
ಈ ಪ್ರಶಸ್ತಿಗೆ ನೀರು, ಶೌಚಾಲಯ, ಸೋಪಿನಿಂದ ಕೈ ತೊಳೆಯುವುದು, ನಿರ್ವಹಣೆ, ವರ್ತನೆ ಹಾಗೂ ಸಾಮರ್ಥ್ಯ ಅಭಿವೃದ್ಧಿ ಈ ಆರು ಅಂಶಗಳನ್ನು ಮಾನದಂಡವಾಗಿ ಪರಿಗಣಿಸಲಾಗಿತ್ತು. ಇವುಗಳನ್ನು ಸರಿಯಾಗಿ ಅಳವಡಿಸಿಕೊಂಡಿರುವ 39 ಶಾಲೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.